ಭೀಮ ಸಂಭ್ರಮ ಕ್ರಿಕೆಟ್ ಕಪ್ ಗೆದ್ದ ಚಾಲೆಂಜರ್ಸ್ ತಂಡ

Oplus_131072
Oplus_131072
Published on

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ 2 ದಿನಗಳ ಕಾಲ ನಡೆದ ಭೀಮ ಸಂಭ್ರಮದ ಸೀಸನ್-5ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈಟರ್ಸ್‌ ತಂಡದ ವಿರುದ್ಧ ಕೆಸ್ತೂರು ಗ್ರಾಮದ ಚಾಲೆಂಜರ್ಸ್ ತಂಡ ಗೆದ್ದು ಭೀಮ ಸಂಭ್ರಮ ಕಪ್ ತಮ್ಮದಾಗಿಸಿಕೊಂಡಿದೆ.

ಗೆದ್ದ ತಂಡಕ್ಕೆ ಬಹುಮಾನ ವಿತರಿಸಿದ ಕಂದಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಕ್ರಿಕೆಟ್ ನಮ್ಮ ದೇಶದ ಪ್ರತಿ ಮೂಲೆಯಲ್ಲೂ ಕಾಣುವ ಜನಪ್ರಿಯ ಆಟವಾಗಿದೆ. ಕೆಸ್ತೂರು ಗ್ರಾಮದಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಏ.13ರಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದ್ದರು. ನಂತರ ಇಲ್ಲಿ ಅನೇಕ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಕೆಸ್ತೂರು ಗ್ರಾಮದ ಚಾಲೆಂಜರ್ಸ್ ತಂಡ ಗೆದ್ದಿದೆ. ಆಟದಲ್ಲಿ ಸೋಲು-ಗೆಲುವು ಕೇವಲ ಒಂದು ಲೆಕ್ಕಾಚಾರ ಅಷ್ಟೆ. ಆದರೆ ಸೋತ ತಂಡಗಳು ಮಾನಸಿಕ ಧೈರ್ಯವನ್ನು ಕಳೆದುಕೊಳ್ಳಬಾರದು. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಅಲ್ಲದೆ ಈ ಪಂದ್ಯಾವಳಿಗೆ ಇಲ್ಲಿನ ಸ್ಥಳೀಯ ಯುವಕರು ಹೆಚ್ಚು ಶ್ರಮ ವಹಿಸಿದ್ದಾರೆ. ಐಪಿಎಲ್ ಮಾದರಿಯಲ್ಲಿ ಆಟಗಾರರ ಹರಾಜು ನಡೆಸಿ ತಂಡವನ್ನು ರಚಿಸಿ ಇಲ್ಲಿ ಪಂದ್ಯಾವಳಿಯ ಆಯೋಜನೆ ಮಾಡಲಾಗಿದೆ. ಇದನ್ನು ತುಂಬ ಅಚ್ಚುಕಟ್ಟಾಗಿ ಮಾಡಿ, ನಿರ್ವಹಿಸಿ ಯಾವುದೇ ಗೊಂದಲಗಳಿಗೂ ಅವಕಾಶ ಮಾಡಕೊಡದೆ ಇಡೀ ಪಂದ್ಯಾವಳಿಯನ್ನು ಪೂರ್ಣಗೊಳಿಸಿರುವ ಇಲ್ಲಿನ ಯುವಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಆಯೋಜಕರಾದ ಬಿ.ಸಚಿನ್, ಬಿ.ಮಹೇಂದ್ರ, ಅಂಬಳೆ ಗ್ರಾಪಂನ ಎಲ್.ನವೀನ, ನಿವೃತ್ತ ಮುಖ್ಯಶಿಕ್ಷಕ ರಂಗನಾಥ, ಗ್ರಾಪಂ ಮಾಜಿ ಉಪಾಧ್ಯಕ್ಷ ರಂಗಸ್ವಾಮಿ, ಕೆಸ್ತೂರು ಹಾಗೂ ಸುತ್ತಮುತ್ತಲ ಗ್ರಾಮದ ಯುವಕರು, ಸಾರ್ವಜನಿಕರು, ಕ್ರೀಡಾಪಟುಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net