

ತುಮಕೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಿಂದ ಒಂದೂವರೆ ತಿಂಗಳಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು 18 ಕಡೆ ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಸರಗಳ್ಳರನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.
ಹಿಂದೂಪುರದ ಶ್ರೀನಿವಾಸನಗರ ಮೋತಕಪಲ್ಲಿ ನಿವಾಸಿ, ಆಟೋ ಚಾಲಕ ಜಿ.ಆರ್.ಚಿನ್ನಾ (34), ರಿಜ್ವಾನ್ (34) ಹಾಗೂ ಕದ್ದ ಮಾಲು ಖರೀದಿಸಿದ್ದ ಚಿಲ್ಲರೆ ಅಂಗಡಿ ವ್ಯಾಪಾರಿ ಭರತ್ (28) ಬಂಧಿತರು. 18 ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದು ಒಟ್ಟು 29,35,670 ರೂ., ಮೌಲ್ಯದ ಚಿನ್ನಾಭರಣಗಳನ್ನು 82 ಸಾವಿರ ರೂ., ಮೌಲ್ಯದ 6 ಮೊಬೈಲ್ಗಳು ಹಾಗೂ 3.80 ಲಕ್ಷ ರೂ., ಮೌಲ್ಯದ ಮೂರು ದ್ವಿ&ಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
18 ಪ್ರಕರಣ: ಮಿಡಿಗೇಶಿ, ಕೊಡಿಗೇನಹಳ್ಳಿ, ಕೊರಟಗೆರೆ, ಪಟ್ಟನಾಯಕನಹಳ್ಳಿ, ಬಡವನಹಳ್ಳಿ, ಗೌರಿಬಿದನೂರು ಗ್ರಾಮಾಂತರ ಮಂಚೇನಹಳ್ಳಿ, ಮಡಕಶಿರಾ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಈ ತಂಡವು ಮಹಿಳೆಯರ ಕೊರಳಿನಲ್ಲಿದ್ದ ಚಿನ್ನದ ಸರ, ಕಿವಿ ಒಲೆ ಮತ್ತು ಮೊಬೈಲ್ ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗುತ್ತಿತ್ತು. ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ ಈ ಪ್ರಕರಣ ನಡೆದಿದ್ದು ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು.
ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ ಕಳ್ಳತನ ಚುನಾವಣಾ ನೀತಿ ಸಂಹಿತೆ ಘೋಷಣೆ ಆದ ದಿನ ಮಾರ್ಚ್ 12 ರಂದು ಮಿಡಿಗೇಶಿ ಠಾಣಾ ವ್ಯಾಪ್ತಿಯ ಐಡಿಹಳ್ಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ನೀತಿ ಸಂಹಿತೆ ಜಾರಿಯಲ್ಲಿ 40 ರಿಂದ 50 ದಿನಗಳಲ್ಲಿ ಅವಧಿಯಲ್ಲಿ ಒಟ್ಟು 18 ಕಡೆ ಚಿನ್ನಾಭರಣ ದೋಚಿದ್ದ ಪ್ರಕರಣಗಳು ನಡೆದಿದ್ದವು. ಈ ಪ್ರಕರಣಗಳ ಪತ್ತೆಗೆ ಮಧುಗಿರಿ ಡಿವೈಎಸ್ಪಿ ಎನ್.ಬಿ.ರಾಮಚಂದ್ರಪ್ಪ ನೇತೃತ್ವದಲ್ಲಿ ಸಿಪಿಐಗಳಾದ ಎಸ್. ರವಿ, ಎಚ್.ಜಿ.ಹನುಮಂತರಾಯಪ್ಪ, ಎಸ್.ಆರ್. ಕಾಂತರೆಡ್ಡಿ, ಪಿಎಸ್ಐಗಳಾದ ಪಿ.ಎಂ.ಅಮ್ಮಣಗಿ, ಮುತ್ತುರಾಜು ಹಾಗೂ ರಮೇಶ್, ಪ್ರಕಾಶ್, ಗೋಪಾಲಕೃಷ್ಣ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಅಂತಿಮವಾಗಿ ಮಧುಗಿರಿ ಸುತ್ತಮುತ್ತಲಿನ ಭೌಗೋಳಿಕ ಚೆನ್ನಾಗಿಬಲ್ಲ ಚಿನ್ನಾ ರಿಜ್ವಾನ್ ಜತೆಗೂಡಿ ಈ ಸರಗಳ್ಳತನಗಳನ್ನು ಮಾಡಿರುವುದು ಪತ್ತೆಯಾಗಿದೆ. ಹಿಂದೂಪುರದ ವಾಲ್ಮೀಕಿ ಸರ್ಕಲ್ ಬಳಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿರುವ ಭರತ್ಗೆ ಕದ್ದು ಮಾಲನ್ನು ಆರೋಪಿಗಳು ಮಾರಿದ್ದರು. ಚಿನ್ನಾನನ್ನು ಬಂಧಿಸಿದ್ದ ಪೊಲೀಸರು ಸೋಮವಾರ ರಿಜ್ವಾನ್ ನನ್ನು ಬಂಧಿಸಿ ಕರೆತರುವಾಗ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾಗ ಆತನ ಕಾಲಿಗೆ ಗುಂಡಿಕ್ಕಿದ್ದ ಪ್ರಸಂಗವು ನಡೆದಿತ್ತು.