

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಸಮೀಪ ಮಹಿಳೆಯ ಕತ್ತಿನಲ್ಲಿದ್ದ ಚಿನ್ನ ಸರ ಕಸಿದ ಇಬ್ಬರು ಕಳ್ಳರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಕೈಗೆ ಬಂದಿದ್ದ ಸರದ ಒಂದು ತುಂಡನ್ನು ಕಳ್ಳನೊಬ್ಬ ನುಂಗಿದ್ದು, ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಕೆ.ಆರ್. ಮಾರುಕಟ್ಟೆಯ ವಿಜಿ (25) ಮತ್ತು ಸಂಜಯ್ (25) ಬಂಧಿತರು. ಎಂ.ಟಿ. ಸ್ಟ್ರೀಟ್ನ ನಿವಾಸಿ ಹೇಮಾ (32) ಸರಗಳ್ಳತನಕ್ಕೆ ಒಳಗಾದವರು. ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಹೇಮಾ ಶನಿವಾರ ರಾತ್ರಿ 9 ಗಂಟೆಗೆ ಚಿಕ್ಕಪೇಟೆಯ ಎಂ.ಟಿ. ಸ್ಟ್ರೀಟ್ನ ಅಂಗಡಿಯಿಂದ ರಕ್ಷಾ ಬಂಧನ ಖರೀದಿಸಿ ಮನೆಗೆ ವಾಪಸಾಗುತ್ತಿದ್ದರು. ಆ ವೇಳೆ ಮೂವರು ಆರೋಪಿಗಳು ಇವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಮೂವರ ಪೈಕಿ ವಿಜಿಯು ಹೇಮಾ ಕತ್ತಿನಲ್ಲಿದ್ದ 80 ಗ್ರಾಂ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದ. ಕೂಡಲೇ ಎಚ್ಚೆತ್ತುಕೊಂಡ ಹೇಮಾ, ಸರವನ್ನು ಗಟ್ಟಿಯಾಗಿ ಹಿಡಿದು ಸಹಾಯ ಕ್ಕಾಗಿ ಕೂಗಿಕೊಂಡಿದ್ದರು. ಚೀರಾಟ ಕೇಳಿ ಸ್ಥಳಕ್ಕೆ ಸಾರ್ವಜನಿಕರು ಬರುತ್ತಿದ್ದುದನ್ನು ಗಮನಿಸಿದ ಕಳ್ಳರು, ಅಲ್ಲಿಂದ ಓಟ ಕಿತ್ತಿದ್ದರು. ಈ ವೇಳೆ ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಕೆ.ಆರ್. ಮಾರುಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದರು. ಶೇ.95 ಚಿನ್ನದ ಸರ ಹೇಮಾ ಕೈಯಲ್ಲಿದ್ದರೆ ಶೇ.5 ಅನ್ನು ಆರೋಪಿಗಳು ಲಪಟಾಯಿಸಿದ್ದರು.
ಸಾರ್ವಜನಿಕರ ಹಲ್ಲೆಯಿಂದ ಗಾಯಗೊಂಡಿದ್ದ ಬಂಧಿತರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರಿಗೂ ಸ್ಕ್ಯಾನಿಂಗ್ ಮತ್ತು ಎಕ್ಸ್ರೇ ಮಾಡಿದಾಗ ವಿಜಿ ಹೊಟ್ಟೆಯೊಳಗೆ ಚಿನ್ನದ ಸರದ ತುಂಡು ಪತ್ತೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ತಾನು ಸಿಕ್ಕಿ ಬೀಳುವ ಭೀತಿಯಿಂದ ಕೈಯಲ್ಲಿದ್ದ ನುಂಗಿದ್ದಾಗಿ ಹೇಳಿದ್ದ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆರೋಪಿ ವಿಜಿ ಹೊಟ್ಟೆಯೊಳಗಿರುವ ಸರದ ತುಂಡು ಹೊರ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಕೆ.ಆರ್. ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.