

ಮಂಗಳೂರು: ಕುಖ್ಯಾತ ಚಡ್ಡಿಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಸ್ಥಳ ಮಹಜರಿಗೆಂದು ಬುಧವಾರ ಬೆಳಗ್ಗೆ ಮೂಲ್ಕಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಅವರು ಪೊಲೀಸರಿಗೆ ಹಲ್ಲೆಗೈದು ತಪ್ಪಿಸಿಕೊಳ್ಳಲೆತ್ನಿಸಿದ್ದು, ತಕ್ಷಣ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದಿದ್ದಾರೆ.
ಬುಧವಾರ ಬೆಳಗ್ಗೆ 6.30ಕ್ಕೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಎಎಸ್‌ಐ ವಿನಯ್ ಕುಮಾರ್ ಹಾಗೂ ಕಾನ್‌ಸ್ಟೆಬಲ್ ಶರತ್ ಗಾಯಗೊಂಡಿದ್ದರೆ, ದರೋಡೆ ಆರೋಪಿಗಳಾದ ರಾಜು ಸಿಂಗ್ವಾನಿಯ(24)ನ ಎಡ ತೊಡೆ ಹಾಗೂ ಬಾಲಿ(22) ಎಂಬಾತನ ಬಲ ಕಾಲಿಗೆ ಗುಂಡೇಟು ತಗುಲಿದೆ. ಇಬ್ಬರನ್ನೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮದ ಕೋಟೆಕಣಿ ಎಂಬಲ್ಲಿ ವೃದ್ಧ ದಂಪತಿಯಿದ್ದ ಮನೆಗೆ ನುಗ್ಗಿ ದರೋಡೆಗೈದ ಆರೋಪಿಗಳು ಮನೆ ವರಾಂಡದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದರು. ಕಾರನ್ನು ಮೂಲ್ಕಿ ಬಸ್ ನಿಲ್ದಾಣ ಸಮೀಪ ನಿಲ್ಲಿಸಿ, ಮಂಗಳೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ ಏರಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆ ಬಸ್‌ನ ಮಾಹಿತಿ ಪಡೆದ ಪೊಲೀಸರು ನಿರ್ವಾಹಕನನ್ನು ವಿಚಾರಿಸಿದಾಗ, ಆರೋಪಿಗಳು ಮಂಗಳೂರಿನಲ್ಲಿ ಇಳಿದು ಬೆಂಗಳೂರು ಬಸ್ಸನ್ನೇರಿರುವ ಮಾಹಿತಿ ಲಭ್ಯವಾಗಿತ್ತು. ಅದರಂತೆ ಪೊಲೀಸರು ಸಕಲೇಶಪುರದಲ್ಲಿ ಬಸ್ ಅಡ್ಡಗಟ್ಟಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಘಟನೆ ನಡೆದ ಐದು ತಾಸಿನಲ್ಲೇ ಆರೋಪಿಗಳು ಸೆರೆಯಾಗಿದ್ದರು.
ಆರೋಪಿಗಳಾದ ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಗೋಗರ್ ತಾಲೂಕು ವಿಶ್ವನಗರದ ರಾಜು ಸಿಂಗ್ವಾನಿಯ(24), ಭೂಪಾಲ್ ಗುಲಾಬ್ಗಂಜ್‌ನ ಮಯೂರ್(30), ಅಶೋಕನಗರ ಮಾಧವ್ಗಡ್ ನಿವಾಸಿ ಬಾಲಿ(22), ಗುಣಾ ಜಿಲ್ಲೆಯ ವಿಕ್ಕಿ(21) ಎಂಬುವರನ್ನು ಉರ್ವ ಠಾಣೆ ಪೊಲೀಸ್ ನಿರೀಕ್ಷಕಿ ಭಾರತಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳ ವಶದಲ್ಲಿದ್ದ ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಚಿನ್ನ, ವಜ್ರದ ಆಭರಣಗಳು, ವಾಚ್ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು.
ಪ್ರಾಥಮಿಕ ಹಂತದ ವಿಚಾರಣೆ ವೇಳೆ ಈ ನಾಲ್ವರೂ ವೃತ್ತಿಪರ ಕಳ್ಳರಾಗಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಾರವಾರ ಪ್ರದೇಶದಲ್ಲಿ ಕಳವು, ಸುಲಿಗೆ ಮಾಡಿರುವುದು ತಿಳಿದು ಬಂದಿದೆ. ರಾಜು ಸಿಂಗ್ವಾನಿಯಾ ವಿರುದ್ಧ ಮನೆಕಳ್ಳತನಕ್ಕೆ ಸಂಬಂಧಿಸಿ ಮಧ್ಯಪ್ರದೇಶ, ಕರ್ನಾಟಕ ಸೇರಿ 10 ಪ್ರಕರಣ ದಾಖಲಾಗಿದ್ದರೆ, ಮತ್ತೋರ್ವ ಆರೋಪಿ ಬಾಲಿ ವಿರುದ್ಧ 2016ರಲ್ಲಿ 2 ಪ್ರಕರಣ, ಮಯೂರ್ ವಿರುದ್ಧ ರಾಜಸ್ತಾನದಲ್ಲಿ 1 ಹಾಗೂ ಕರ್ನಾಟಕದಲ್ಲಿ 2 ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.
ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಪಣಂಬೂರಿನಿಂದ 200 ಮೀಟರ್ ಮುಂದಕ್ಕೆ ಹೋದಾಗ ವಾಹನ ನಿಲ್ಲಿಸುವಂತೆ ಸೂಚಿಸಿದ ಆರೋಪಿ ರಾಜು ಸಿಂಗ್ವಾನಿಯ, ರಸ್ತೆಯ ಎಡಬದಿಯ ತಗ್ಗಿನ ಪ್ರದೇಶ ತೋರಿಸಿ ಆ ಜಾಗದಲ್ಲಿ ಕೃತ್ಯಕ್ಕೆ ಬಳಸಿದ ರಾಡ್ ಬಿಸಾಡಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ವಾಹನದಲ್ಲಿ ಆರೋಪಿಗಳಾದ ಮಯೂರ್ ಮತ್ತು ವಿಕ್ಕಿಯನ್ನು ಬೆಂಗಾವಲಿನಲ್ಲಿಟ್ಟು ರಾಜು ಸಿಂಗ್ವಾನಿಯಾ ಹಾಗೂ ಬಾಲಿ ಜತೆ ವಾಹನದಿಂದ ಇಳಿದು ಹೋಗುತ್ತಿದ್ದಾಗ, ಹ್ಯಾಂಡ್‌ಕಫ್ಸ್‌ನಲ್ಲಿ ಹಿಡಿದುಕೊಂಡಿದ್ದ ಎಎಸ್‌ಐ ವಿನಯ್ ಅವರನ್ನು ಆರೋಪಿ ರಾಜು ಸಿಂಗ್ವಾನಿಯಾ ಏಕಾಏಕಿ ಎಳೆದಿದ್ದಾನೆ. ಕೆಳಗೆ ಬಿದ್ದ ವಿನಯ್ ಮೇಲೆ ಹ್ಯಾಂಡ್‌ಕಪ್ಸ್‌ಹಲ್ಲೆ ನಡೆಸಿದ್ದಾನೆ. ಅದೇ ಸಮಯ ಆರೋಪಿ ಬಾಲಿ ಕೂಡ ತನ್ನನ್ನು ಹಿಡಿದುಕೊಂಡಿದ್ದ ಪೊಲೀಸ್ ಪೇದೆ ಶರತ್ ಅವರನ್ನು ಬೀಳಿಸಿ ಹಲ್ಲೆ ಮಾಡಿದ್ದಾನೆ. ಈ ಸಂದರ್ಭ ಪೊಲೀಸ್ ನಿರೀಕ್ಷಕಿ ಭಾರತಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದ ಆರೋಪಿಗಳು ಮತ್ತೆ ಪೊಲೀಸರಿಗೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರ ಪ್ರಾಣ ಹಾನಿ ತಪ್ಪಿಸಲು ಭಾರತಿ ಅವರು ರಾಜು ಸಿಂಗ್ವಾನಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಮತ್ತೊಬ್ಬ ಆರೋಪಿ ಬಾಲಿ ಹಲ್ಲೆ ಮುಂದುವರಿಸಿದ್ದಾಗ ಆತನ ಕಾಲಿಗೂ ಗುಂಡು ಹೊಡೆದಿದ್ದಾರೆ ಎಂದು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು. ಡಿಸಿಪಿಗಳಾದ ದಿನೇಶ್ ಕುಮಾರ್ ಹಾಗೂ ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.
ಚಡ್ಡಿ ಗ್ಯಾಂಗ್ ದರೋಡೆ ಘಟನೆ ನಡೆದು ಐದು ಗಂಟೆಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸುಲಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಎಸ್‌ಐ ಭಾರತಿ ನೇತೃತ್ವದ ತನಿಖಾ ತಂಡ ಹಾಗೂ ಉಳಾಯಿಬೆಟ್ಟು ಡಕಾಯಿತಿ ಪ್ರಕರಣ ಭೇದಿಸಿದ ಎಸಿಪಿ ಧನ್ಯಾ ನೇತೃತ್ವದ ತಂಡಕ್ಕೆ ತಲಾ 50 ಸಾವಿರ ರೂ. ಬಹುಮಾನವನ್ನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಘೋಷಿಸಿದ್ದಾರೆ.
ದೇರೆಬೈಲ್‌ನ ಕೋಟೆಕಣಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಿಸಿ ಕ್ಯಾಮರಾ ಪ್ರಮುಖ ಪಾತ್ರ ವಹಿಸಿದ್ದು, ಸಾರ್ವಜನಿಕರು ತಮ್ಮ ಮನೆಗಳ ಮುಖ್ಯ ರಸ್ತೆ ಹಾಗೂ ಮನೆ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಕೆಗೆ ಆದ್ಯತೆ ನೀಡಬೇಕು. ಸಿಸಿ ಕ್ಯಾಮರಾ ರಾತ್ರಿ ಹೊತ್ತಿನಲ್ಲೂ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಹಾಗೂ ರೆಕಾರ್ಡಿಂಗ್ ವ್ಯವಸ್ಥೆ ಹೊಂದಿರುವುದನ್ನು ಖಾತ್ರಿಪಡಿಸಬೇಕು. ಪೊಲೀಸರು ಈಗಾಗಲೇ ಬೀಟ್ ವ್ಯವಸ್ಥೆ ಬಿಗಿಗೊಳಿಸಿದ್ದಾರೆ. ಇದಲ್ಲದೆ ಮನೆಯಲ್ಲಿ ಒಂಟಿಯಾಗಿ ಇರುವವರು ಹಾಗೂ ಮನೆ ಬಿಟ್ಟು ಹಲವು ದಿನ ಹೋಗುವುದಿದ್ದರೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತದೆ ಎಂದು ಪೊಲೀಸ್‌ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.