

ಕೊಳ್ಳೇಗಾಲ: ಕರ್ನಾಟಕ ಕಲೆ ಹಾಗೂ ಸಂಸ್ಕೃತಿಯ ನೆಲೆಬೀಡಾದ ಚಾಮರಾಜನಗರ ಜಿಲ್ಲೆ ಸಾಂಸ್ಕೃತಿಕ ಮಹಾಪುರುಷರು ನಡೆದಾಡಿದ ಪುಣ್ಯ ಸ್ಥಳವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬಣ್ಣಿಸಿದರು.
ಪಟ್ಟಣದ ಮಂಜುನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಚಾಮರಾಜನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸೌರಭ 2023-24ರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಮಲೆ ಮಹದೇಶ್ವರ, ಶ್ರೀಮಂಟೇಸ್ವಾಮಿ, ಶ್ರೀಸಿದ್ದಪ್ಪಾಜಿಯಂತಹ ಸಾಂಸ್ಕೃತಿಕ ನಾಯಕರು ನಡೆದಾಡಿದಂತಹ ಈ ಜಿಲ್ಲೆಯಲ್ಲಿ ಸಾಂಸ್ಕೃತಿಕ ಲೋಕದ ವೈಭವವನ್ನು ಸೃಷ್ಟಿ ಮಾಡಬಹುದಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕೊಳ್ಳೇಗಾಲ ಉಪವಿಭಾಗ ಮಟ್ಟದಲ್ಲಿ ಮಾಡುತ್ತಿದ್ದು, ಪಟ್ಟಣದ ಮಂಜುನಾಥ ನಗರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಎಂಜಿಎಸ್‌ವಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆದಿದ್ದರೆ ದಾರಿಹೋಕರು ಪಾಲ್ಗೊಂಡು ಕಣ್ತುಂಬಿಕೊಳ್ಳುತ್ತಿದ್ದರು. ಆದರೂ ಇಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಜನರು ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ ಎಂದರು.
ಇದಕ್ಕೂ ಮೊದಲು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತದಿಂದ ಬಡಾವಣೆಯ ಮುಖ್ಯರಸ್ತೆ ಮೂಲಕ ಕಲಾ ತಂಡಗಳ ಮೆರವಣಿಗೆ ನಡೆಸಲಾಯಿತು. ಗೊರವರ ಕುಣಿತ, ಡೊಳ್ಳುಕುಣಿತ, ಕೀಲು ಕುದುರೆ ಜೋಕರ್, ತಮಟೆ ಕಲಾವಿದರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ನಗರಸಭಾ ಸದಸ್ಯ ಪ್ರಕಾಶ್ ಶಂಕರಪುರ, ನಗರಸಭೆ ಮಾಜಿ ಅಧ್ಯಕ್ಷೆ ರೇಖಾ ರಮೇಶ್, ಬಸ್ತಿಪುರ ಶಾಂತರಾಜು, ಜಿ.ಪಿ.ಶಿವಕುಮಾರ್, ಸುಮಾ ಸುಬ್ಬಣ್ಣ, ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಷ, ಮಾಜಿ ಸದಸ್ಯೆ ಕೃಷ್ಣವೇಣಿ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ, ಶಾಲೆಯ ಮುಖ್ಯ ಶಿಕ್ಷಕಿ ಅಸಂತ ಮೇರಿ ಮತ್ತಿತರಿದ್ದರು.