

ತಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಅದನ್ನು ಯಾರೂ ಭೇದಿಸದ ರೀತಿಯಲ್ಲಿ ಕಾರ್ಯಕರ್ತರು, ಮುಖಂಡರು ರಕ್ಷಾ ಕವಚವಾಗಿ ನಿಂತು ಪಕ್ಷದ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನವಿ ಮಾಡಿದರು.
ಪಟ್ಟಣದ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ಕಾಂಗ್ರೆಸ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಮತ ಯಾಚನೆ ಮಾಡಿ ಅವರು ಮಾತನಾಡಿದರು.
ಸುನೀಲ್ ಬೋಸ್ ನಿಮ್ಮ ಹುಡುಗ, 15 ವರ್ಷಗಳಿಂದ ನಿಮ್ಮೊಂದಿಗೆ ಒಡನಾಟ ಹೊಂದಿದ್ದು, ಕ್ಷೇತ್ರದ ಜನರ ಕಷ್ಟ ಸುಖಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿದ್ದಾನೆ. ಈ ಬಾರಿ ನಿಮ್ಮೆಲ್ಲರ ಒತ್ತಾಯದಿಂದಾಗಿ ಲೋಕಸಭೆಗೆ ಕಾಂಗ್ರೆಸ್ ಅವನಿಗೆ ಟಿಕೆಟ್ ನೀಡಿದೆ. ಮುಂದೆ ಅವನನ್ನು ಗೆಲ್ಲಿಸಿ ಲೋಕಸಭೆ ಕಳುಹಿಸಿಕೊಡುವ ಜವಾಬ್ದಾರಿ ನಿಮ್ಮದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಅವನನ್ನು ಗೆಲ್ಲಿಸಿ ಅವನಿಗೆ ಆಶೀರ್ವಾದ ಮಾಡುವಂತೆ ಕೋರಿದರು.
ಈಗಾಗಲೇ ಕ್ಷೇತ್ರಕ್ಕೆ ನಾನು ಪ್ರತಿನಿಧಿಯಾಗಿದ್ದೇನೆ, ಸಿದ್ದರಾಮಯ್ಯ ಪ್ರತಿನಿಧಿಯಾಗಿದ್ದಾರೆ, ಇನ್ನೊಬ್ಬ ಪ್ರತಿನಿಧಿ ಸುನೀಲ್ ಆಗಬೇಕು. ಮತ್ತೊಬ್ಬ ಪ್ರತಿನಿಧಿ ಯತೀಂದ್ರ ಸಿದ್ದರಾಮಯ್ಯ ಆಗಬೇಕು, ಹಾಗಾಗಿ ನೀವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಜಯ ತಂದುಕೊಡಬೇಕು ಎಂದರು.
ಬಿಜೆಪಿ ಸರ್ಕಾರ ಧರ್ಮ, ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ. ಜನರು ಜಾಗೃತರಾಗಿ ಮತ ಚಲಾಯಿಸಬೇಕು. ಅಭಿವೃದ್ಧಿ ಪರವಾಗಿ, ದೀನ ದಲಿತರ ಪರ ಸದಾ ಕಾಲ ಚಿಂತನೆ ನಡೆಸುವ ಕಾಂಗ್ರೆಸ್‌ಗೆ ಅಧಿಕಾರ ನೀಡಬೇಕು. ಜನ ವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿಯಬಾರದು, ಜನರ ಬದುಕನ್ನು ನಾಶ ಮಾಡಲಿಕ್ಕೆ, ಸರ್ವಾಧಿಕಾರಿ ಆಡಳಿತ ನಡೆಸಲಿಕ್ಕೆ ಅವರು ಸಂವಿಧಾನ ಬದಲಾವಣೆ ಮಾಡಿ ಪ್ರಜಾಪ್ರಭುತ್ವ ಅಳಿಸುವ ಕೆಲಸವನ್ನು ಮಾಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದರು.
ಲೋಕಸಭೆ ಚುನಾವಣೆ, ವಿಧಾನ ಸಭೆ ಚುನಾವಣೆ, ಜಿಪಂ ಚುನಾವಣೆಗಳಂತಲ್ಲ, 2 ಸಾವಿರ ಬೂತ್ ಗಳಿವೆ. ಸಾವಿರಾರು ಹಳ್ಳಿಗಳಿವೆ. 15-16 ದಿನಗಳಲ್ಲಿ ಅಭ್ಯರ್ಥಿ ಹೋಗಲು ಸಾಧ್ಯವಾಗದು, ಹಾಗಾಗಿ ನಿಮ್ಮ ಊರಲ್ಲಿ ನಿಮ್ಮದೇ ಬೂತ್, ನೀವೇ ಜವಾಬ್ದಾರಿ ನೋಡಿಕೊಳ್ಳಬೇಕು ಎಂದ ಅವರು, ನನಗೆ ನೀಡಿದ ರಾಜಕೀಯ ಬೆಂಬಲವನ್ನು ಸುನೀಲ್ ಬೋಸ್‌ಗೂ ನೀಡಿ ಅವನನ್ನು ಅತ್ಯಧಿಕ ಬಹು ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಜಿಪಂ ಮಾಜಿ ಸದಸ್ಯ ತಲಕಾಡು ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಪುರಸಭಾ ಮಾಜಿ ಅಧ್ಯಕ್ಷರಾದ ಎಸ್.ಮದನ್‌ರಾಜು, ಟಿ.ಎಂ.ನಂಜುಂಡಸ್ವಾಮಿ, ತುಂಬಲ ಪ್ರಕಾಶ್, ಬಾದಾಮಿ ಮಂಜು, ಉಕ್ಕಲಗೆರೆ ಬಸವಣ್ಣ, ಮನ್ಸೂರ್ ಅಲಿ, ಶಶಿಕಲಾ ನಾಗರಾಜು, ಪಪಂ ಮಾಜಿ ಅಧ್ಯಕ್ಷ ಬಸವಣ್ಣ, ತಾಪಂ ಅಧ್ಯಕ್ಷ ಎಚ್.ಎನ್.ಉಮೇಶ್, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ರೇಣುಕಾರಾಮು, ಲತಾ ಜಗದೀಶ್, ಕೊತ್ತೆಗಾಲ ಬಸವರಾಜು, ಪ್ರೊ.ಡಾ.ಜ್ಞಾನಪ್ರಕಾಶ್, ಬಸವರಾಜು, ಮಾಡ್ರಹಳ್ಳಿ ಶಿವಮೂರ್ತಿ, ಸುಹಾಸ್ ನಾಯಕ್, ಗ್ರಾಪಂ ಮಾಜಿ ಅಧ್ಯಕ್ಷ ಎ.ಜೆ.ವೆಂಕಟೇಶ್ ಮತ್ತಿತರರಿದ್ದರು.