ಸಿಇಟಿ ಬರೆಯಲಿರುವ 11750 ವಿದ್ಯಾರ್ಥಿಗಳು

PU Exam
Published on

16, 17 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ

ತುಮಕೂರು: ಇಂಜಿನಿಯರಿಂಗ್​ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಏ.16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಕೆ-ಸಿಇಟಿ) ನಡೆಯಲಿದ್ದು ಜಿಲ್ಲೆಯಲ್ಲಿ 11750 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ನಗರದ 18, ತಿಪಟೂರಿನ 4 ಹಾಗೂ ಶಿರಾ ನಗರದ 3 ಪರೀಕ್ಷಾ ಕೇಂದ್ರ ಸೇರಿ ಒಟ್ಟು 25 ಕೇಂದ್ರಗಳಲ್ಲಿ ಸಿಇಟಿ ಬರೆಯಲು ವ್ಯವಸ್ಥೆ ಮಾಡಿದ್ದು ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿದೆ. ವಿದ್ಯಾರ್ಥಿಗಳು ಪರೀಕ್ಷೆ ಆರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು.

ಭೌತಶಾಸ್ತ್ರ, ರಸಾಯನಶಾಸ್ತ್ರ: ಮೊದಲ ದಿನವಾದ ಬುಧವಾರ ಬೆಳಗ್ಗೆ 10.30 ರಿಂದ 11.50ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನಶಾಸ್ತ್ರ ವಿಷಯಗಳ ಪರೀೆ ಇರಲಿದೆ.

2ನೇ ದಿನವಾದ ಗುರುವಾರ ಬೆಳಗ್ಗೆ 10.30 ರಿಂದ 11.50ರವರೆಗೆ ಗಣಿತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50ರವರೆಗೆ ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ವೆಬ್​ ಕ್ಯಾಸ್ಟಿಂಗ್​: ಪರೀಕ್ಷಾ ಕೇಂದ್ರಗಳ ಮೇಲೆ ಸಿಸಿಟಿವಿ ಕಣ್ಗಾವಲಿರಲಿದೆ. ವೆಬ್​ ಕ್ಯಾಸ್ಟಿಂಗ್​ ಮೂಲಕ ಎಲ್ಲಾ 25 ಕೇಂದ್ರಗಳ ಮೇಲೆ ನಿಗಾ ಇಡಲಾಗುವುದು. ಇನ್ನೂ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ., ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್​ ಆದೇಶ ಹೊರಡಿಸಿದ್ದಾರೆ. ಈ ನಿಷೇಧಾಜ್ಞೆ ಏ.16 ಮತ್ತು 17ರಂದು ಬೆಳಗ್ಗೆ 10 ರಿಂದ ಸಂಜೆ 4.30ರ ವರೆಗೆ ಜಾರಿಯಲ್ಲಿರುತ್ತದೆ.

ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಕಂಡುಬಂದಲ್ಲಿ ಅವರ ವಿರುದ್ಧ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಎಚ್ಚರಿಸಿದ್ದಾರೆ.

ಗೊಂದಲಕ್ಕೆ ಅವಕಾಶ ಕೊಡಬೇಡಿ

ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಕೆಲವು ಪ್ರಕರಣಗಳಲ್ಲಿ ದುರುದ್ದೇಶದಿಂದ ನಕಲಿ ಪ್ರಶ್ನೆಪತ್ರಿಕೆಗಳ ಫೋಟೋಗಳನ್ನು ತೆಗೆದು ವಾಟ್ಸ್​ಆ್ಯಪ್​, ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಲು ಅವಕಾಶವಿರುವುದರಿಂದ ಪರೀಕ್ಷಾ ಮುಖ್ಯ ಅಧೀಕ್ಷಕರಿಗೆ ಕ್ಯಾಮರಾ ಹೊಂದಿರುವ ಸಾಮಾನ್ಯ ಮೊಬೈಲ್​ ಇರಿಸಿಕೊಳ್ಳಲು ಅವಕಾಶವಿದೆ. ಉಳಿದ ಎಲ್ಲಾ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್​ ತರುವುದು, ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net