

ತುಮಕೂರು: ಅಂಗವಿಕಲರನ್ನು ಕಡೆಗಣಿಸದೆ, ನಿಂದಿಸದೆ ಆತ್ಮಗೌರವದಿಂದ ಬದುಕಲು ಅವಕಾಶ ಕಲ್ಪಿಸಬೇಕು. ಅವರಲ್ಲಿ ಆತ್ಮಸ್ಥೆ$ರ್ಯ ತುಂಬಲು ಸಮಾಜದ ಬೆಂಬಲದ ಬಲಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಡಿಐಪಿ ಯೋಜನೆಯಡಿ ಜಿಲ್ಲೆಯ ಕುಣಿಗಲ್, ಶಿರಾ, ಪಾವಗಡ ತಾಲೂಕಿನ ಅಂಗವಿಕಲರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇಕಡಾ 5ರಷ್ಟು ಅಂಗವಿಕಲರಿದ್ದು ಅವರಲ್ಲಿ ಸಾಮಾನ್ಯ ಜನರಿಗಿಂತ ಹೆಚ್ಚು ಪ್ರತಿಭೆ, ಬುದ್ಧಿವಂತಿಕೆ ಇದೆ ಎಂದು ತಿಳಿಸಿದರು.
ನಮ್ಮ ದೇಶದ ಅಂಗವಿಕಲ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸುವುದರ ಜತೆಗೆ ಉತ್ತಮ ಸಾಧನೆ ಮಾಡಿದ್ದಾರೆ. ಸ್ವಾವಲಂಬಿ ಬದುಕಿಗಾಗಿ ಅವರ ಉದ್ಯೋಗ ಕ್ಷೇತ್ರಗಳು ಬದಲಾಗುತ್ತಾ, ಹೊಸ ಅವಕಾಶಗಳೂ ದೊರೆಯುತ್ತಿವೆ. ಪ್ರಸ್ತುತ ದಿನಗಳಲ್ಲಿ ಅಂಗವಿಕಲರು ಆಧುನಿಕ ತಂತ್ರಜ್ಞಾನದ ಶಿಕ್ಷಣ ಪಡೆದು ಕಂಪ್ಯೂಟರ್ ಆಪರೇಟರ್, ಡೇಟಾ ಎಂಟ್ರಿ ಆಪರೇಟರ್ ನೌಕರಿ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎಂದರು.
ಅಂಗವಿಕಲರಿಗೆ ಶೇ.3ರಷ್ಟು ಮೀಸಲು: ಅಂಗವಿಕಲರಿಗಾಗಿ ಎಲ್ಲ ಇಲಾಖೆಗಳ ಅನುದಾನದಲ್ಲಿ ಶೇಕಡಾ 3ರಷ್ಟು ಮೀಸಲಾತಿ ನೀಡಲಾಗುತ್ತದೆ. ಈ ಅನುದಾನವನ್ನು ಬಳಸಿಕೊಂಡು ಅವರಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ವಿಶೇಷ ಯೋಜನೆಯಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಗುರುತಿನ ಚೀಟಿ ಹೊಂದಿರಬೇಕು. ಅದಕ್ಕಾಗಿ ಪ್ರತಿ ತಾಲೂಕಿನಲ್ಲಿ ಶಿಬಿರಗಳನ್ನು ನಡೆಸಿ ಅಂಗವಿಕಲರಿಗೆ ಗುರುತಿನ ಚೀಟಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ.99ರಷ್ಟು ಯುಡಿಐಡಿ ಕಾರ್ಡುಗಳನ್ನು ನೀಡಲಾಗಿದೆ ಎಂದು ಜಿಪಂ ಸಿಇಒ ಜಿ.ಪ್ರಭು ತಿಳಿಸಿದರು.
ವಿವಿಧ ವಸತಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 10,000 ನಿವೇಶನಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ವಿಶೇಷಚೇತನರಿಗಾಗಿ ಶೇಕಡಾ 3ರಫಿ್ಟು ಮೀಸಲಾತಿ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ವಿಶೇಫಿಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಹತೆಗನುಗುಣವಾಗಿ ಲ್ಯಾಪ್ಟಾಪ್ಗಳನ್ನು ನೀಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ , ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಎಚ್ಎಎಲ್ ಪ್ರತಿನಿಧಿ ಪ್ರಧಾನ ವ್ಯವಸ್ಥಾಪಕ ಕೃಷ್ಣಪ್ಪ, ಅಂಗವಿಕಲ ಕಲ್ಯಾಣಾಧಿಕಾರಿ ಚಿದಾನಂದಮೂರ್ತಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬ್ಯಾಟರಿ ಚಾಲಿತ ತ್ರಿಚಕ್ರ ಸುಮಾರು 600 ಫಲಾನುಭವಿಗಳಿಗೆ ಬ್ಯಾಟರಿ ಚಾಲಿತ ಮೊಪೆಡ್, ಕೈ ಚಾಲಿತ ಸೈಕಲ್, ಅಂಧರಿಗೆ ಊರುಗೋಲು, ವಾಕರ್, ಬೆಲ್ ಕಿಟ್, ಸ್ಮಾರ್ಟ್ ಫೋನ್, ವ್ಹೀಲ್ ಚೇರ್, ಎಂಆರ್ ಕಿಟ್, ಮತ್ತಿತರ ಸಲಕರಣೆ ಹಾಗೂ ಪಾಲಿಕೆ ವ್ಯಾಪ್ತಿಯ 3 ವಾರ್ಡ್ ಹಾಗೂ 38 ಗ್ರಾಮ ಪಂಚಾಯತಿಗಳಿಗೆ ಕ್ಷಯರೋಗ ಮುಕ್ತವೆಂದು ಘೋಷಿಸಿ ಸಾಂಕೇತಿಕವಾಗಿ ಪ್ರಮಾಣಪತ್ರಗಳನ್ನು ಸಚಿವ ಪರಮೇಶ್ವರ್ ಈ ಸಂದರ್ಭದಲ್ಲಿ ವಿತರಿಸಿದರು.
ಅಂಗವಿಕಲರಿಗು ಸಮಾನ ಅವಕಾಶಗಳು ದೊರೆಯಬೇಕು. ಅವರಲ್ಲಿಯೂ ಬಹಳ ಪ್ರತಿಭಾವಂತವರಿದ್ದು, ಉತ್ತೇಜನ ನೀಡುವ ಕಾರ್ಯವನ್ನು ಸರ್ಕಾರದಿಂದ ಮಾಡಬೇಕು. ಆತ್ಮಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಿಸಬೇಕಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ