ಡಿಕೆಶಿ ವಿರುದ್ಧ ಸಿಬಿಐ ತನಿಖೆ ವಾಪಸ್, ಜನತೆ ಮುಂದೆ ಬೆತ್ತಲಾದ ರಾಜ್ಯ ಸರ್ಕಾರ

Narayan_Swamy
Published on

ತುಮಕೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲು ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರವು ರಾಜ್ಯದ ಜನತೆ ಮುಂದೆ ಸರ್ಕಾರವನ್ನು ಬೆತ್ತಲಾಗಿಸಿದೆ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಲೇವಡಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಯ್ದೆ, ಕಾನೂನಿ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯಗೆ ಈ ಹಿಂದಿನ ಸರ್ಕಾರವು ಸಿಬಿಐನವರು ಅನುಮತಿ ಕೋರಿದ್ದರಿಂದ ಪ್ರಕರಣದ ತನಿಖೆಗೆ ಅನುಮಿತಿ ಕೊಟ್ಟಿದ್ದರೆಂಬುದು ಮಾಹಿತಿ ಇಲ್ಲವೇ? ಸಿಬಿಐ ತನಿಖೆಗೆ ತಡೆ ನೀಡುವಂತೆ ಡಿಕೆಶಿ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ಈ ಸಂಬಂಧ ತೀರ್ಪು ಬರುವವರೆಗೆ ಕಾಯಲಿ ಎಂದು ತಿರುಗೇಟುಕೊಟ್ಟರು.

ಕೋರ್ಟ್‌ಗೆ ಸವಾಲು: ನ್ಯಾಯಾಲಯದ ಮುಂದೆಯೇ ಕ್ಲೀನ್ ಚಿಟ್ ಪಡೆದು ಶಿವಕುಮಾರ್ ಜನರ ಮುಂದೆ ಹೋಗಬೇಕಿತ್ತು. ಸಂಪುಟದಲ್ಲಿ ವಾಪಸ್ ತೆಗೆದುಕೊಳ್ಳುವ ನಿರ್ಧಾರವು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ. ಇದು ಸಿಬಿಐಗೆ ಹಾಕಿರುವ ಸವಾಲು ಅಲ್ಲ, ನ್ಯಾಯಾಲಯಕ್ಕೆ ಹಾಕಿರುವ ಸವಾಲು. ಇಂತಹ ಪ್ರಕರಣಗಳನ್ನು ಸಂಪುಟದಲ್ಲಿ ಚರ್ಚೆ ಮಾಡುವುದು ಸೂಕ್ತವಲ್ಲ. ಇನ್ನೂ ಹಿಂಪಡೆಯುವ ಯಾವುದೇ ಅಧಿಕಾರ ಇಲ್ಲವೆಂಬುದು ನನ್ನ ಅಭಿಪ್ರಾಯ ಎಂದು ನಾರಾಯಣಸ್ವಾಮಿ ತಿವಿದರು.

2019ರಲ್ಲಿ ಅಂದಿನ ರಾಜ್ಯ ಸರ್ಕಾರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐ ವಹಿಸಿರುವುದು ಕಾನೂನಾತ್ಮಕವಾಗಿ ಪ್ರಕ್ರಿಯೆ ನಡೆದಿರಲಿಲ್ಲ ಎಂಬ ಕಾಂಗ್ರೆಸ್ ಸಮರ್ಥನೆಗೆ ತಿರುಗೇಟು ಕೊಟ್ಟ ಸಚಿವರು, ಇಷ್ಟು ದಿನ ಎನು ಮಾಡುತ್ತಿದ್ದರು. ಸ್ಪೀಕರ್ ಅನುಮತಿ ಪಡೆಯದೆ ಅಥವಾ ಅಂದಿನ ಅಡ್ಟೋಕೇಟ್ ಜನರಲ್ ವೈರುಧ್ಯ ವರದಿ ಇದ್ದಾಗಲೂ ಈ ಪ್ರಕರಣವು ನ್ಯಾಯಾಲಯದಲ್ಲಿ ಬಂದಿದೆ. ಅನೇಕ ಪ್ರಕರಣಗಳು ಡಿಕೆಶಿ ವಿರುದ್ಧ ಇದ್ದು ನ್ಯಾಯಾಲಯದಲ್ಲೇ ವಜಾ ಮಾಡಿಸಬಹುದಿತ್ತು. ರಾಜ್ಯ ಸರ್ಕಾರಕ್ಕೆ ನೀವೇ ಯಾಕೆ ಕಪ್ಪು ಚುಕ್ಕೆ ಇಟ್ಟಿರಿ ಎಂದು ಮುಖ್ಯಮಂತ್ರಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.

ಲೋಕಸಭೆ ಚುನಾವಣೆಗೂ ಮೊದಲೇ ಒಳ ಮೀಸಲಾತಿ ಜಾರಿ ಆಗಲಿದೆ. ಈ ರಾಜ್ಯ ಸರ್ಕಾರದ ಕೆಲಸ ಏನಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹೆಚ್ಚಳ ಮಾಡಿದ್ದು ಬ್ಯಾಕ್‌ಲಾಗ್ ಹುದ್ದೆಯಲ್ಲಿ ಅದು ಜಾರಿಯಾಗಿದೆ. ಇದು ಮೊದಲ ಹಂತದಲ್ಲಿ ಗೆಲುವು ಸಾಧಿಸಿದಂತಾಗಿದೆ. ಇನ್ನೂ ಅರುಣ್ ಮಿಶ್ರ ಪ್ರಕರಣದ ತೀರ್ಪ ಅನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು ಫೆಬ್ರವರಿಯಲ್ಲಿ ಅಂತಿಮ ತೀರ್ಪು ಹೊರಬೀಳಲಿದೆ. ಎ.ನಾರಾಯಣಸ್ವಾಮಿ ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net