ಆನ್ಲೈನ್ ದೂರಿಗೆ ಕೇಂದ್ರ ಸರ್ಕಾರ ಸ್ಪಂದನೆ : ತುರ್ತು ಕಾಮಗಾರಿಗೆ ಸೂಚನೆ : ಹೆದ್ದಾರಿ ಅವ್ಯವಸ್ಥೆ ಬಗ್ಗೆ ಸ್ಥಳೀಯರಿಂದ ಮನವಿ

New Project (34)
Published on

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ ಸಾಗುವ ಹಳೆಯಂಗಡಿ ಜಂಕ್ಷನ್ ಬಳಿ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಅಪಾಯಕಾರಿಯಾಗಿ ಪರಿಣಮಿಸಿದ್ದು ಸ್ಥಳೀಯರು ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ಆನ್ಲೈನ್ ಮುಖಾಂತರ ಹಳೆಯಂಗಡಿ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಕೇಂದ್ರ ಹೆದ್ದಾರಿ ಇಲಾಖೆಗೆ ದೂರು ಸಲ್ಲಿಸಿದ್ದರು.

ಶನಿವಾರ ಬೆಳಗ್ಗೆ ಕೇಂದ್ರ ಹೆದ್ದಾರಿ ಇಲಾಖೆಯಿಂದ ಬಂದ ತುರ್ತು ಸೂಚನೆ ಮೇರೆಗೆ ಇಲಾಖೆ ಸಿಬ್ಬಂದಿ ಹಳೆಯಂಗಡಿ ಹೆದ್ದಾರಿ ಬಳಿ ತುರ್ತು ಕಾಮಗಾರಿ ಆರಂಭಿಸಿದ್ದಾರೆ. ಹೆದ್ದಾರಿ ಬದಿಯಲ್ಲಿ ಜೆಸಿಬಿ ಮುಖಾಂತರ ತೋಡು ನಿರ್ಮಿಸಿ ಮಳೆ ನೀರು ಹರಿದು ಹೋಗಲು ಬೃಹದಾಕಾರದ ಚರಂಡಿ ತೆಗೆಯಲಾಗಿದೆ.

ಸ್ಥಳೀಯ ಅಧಿಕಾರಿಗಳಿಗೆ, ಗ್ರಾಮಸಭೆಗಳಲ್ಲಿ ದೂರು ಹಾಗೂ ಮಾಧ್ಯಮಗಳಲ್ಲಿ ಇಲ್ಲಿನ ಸಮಸ್ಯೆ ಬಿಂಬಿತವಾಗಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಆದರೆ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ ತಕ್ಷಣ ಅಲ್ಲಿನ ಸೂಚನೆಯಂತೆ ಕ್ರಮಕೈಗೊಂಡಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ. ರಸ್ತೆ ಬದಿಯ ಮನೆಯವರು ಮನೆ ಎದುರು ತೋಡು ತೆಗೆದು ಹಾಗೇ ಬಿಡುವುದರಿಂದ ನಡೆದಾಡಲು ಹಾಗೂ ವಾಹನ ಚಾಲನೆಗೆ ಸಮಸ್ಯೆಯಾಗುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಸ್ಥಳೀಯರನ್ನು ಸಮಾಧಾನಪಡಿಸಿ ತೋಡಿಗೆ ಪೈಪ್ ಅಳವಡಿಸಲು ಸಲಹೆ ನೀಡಿದರು. ಬಳಿಕ ಕಾಮಗಾರಿ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net