ಕೇಂದ್ರ ಸರ್ಕಾರ ಹಿರಿಯಣ್ಣ ಇದ್ದಂತೆ ಹೀಗೆಂದ ಕಾಂಗ್ರೆಸ್ ಸಚಿವ !!

Param_Shobha
Published on

ತುಮಕೂರು: ಕೇಂದ್ರ ಸರ್ಕಾರ ನಮ್ಮ ಹಿರಿಯಣ್ಣ ಇದ್ದಂತೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ಪ್ರಭಾವಬೀರಿ ಎನ್‌ಡಿಆರ್‌ಎಫ್ ಅಥವಾ ಬರ ಪರಿಹಾರ ಕೊಡಿಸಲು ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹೇರುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಆಗ್ರಹಿಸಿದರು.

ಎಪಿಎಂಸಿ ಆವರಣದಲ್ಲಿ ಬುಧವಾರ ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಕೊಳವೆಬಾವಿಯಲ್ಲು ನೀರಿನ ಅಭಾವ ಎದುರಾಗಿದೆ. ಕೇಂದ್ರ ಸರ್ಕಾರಕ್ಕೆ ಬರಗಾಲಕ್ಕೆ 17500 ಕೋ. ರೂ. ನೆರವು ಕೋರಿದ್ದೇವೆ. ಇದುವರೆಗೆ ಯಾವ ಹಣ ಬಂದಿಲ್ಲ. ಎನ್‌ಡಿಆರ್‌ಎಫ್ ನಿಂದನು ಹಣ ಬಂದಿಲ್ಲ. ಕೇಂದ್ರದ ಮೇಲೆ ಒತ್ತಡಹೇರಿ ಬರ ಪರಿಹಾರ ಕೊಡಿಸುವಂತೆ ಒತ್ತಾಯಿಸಿದರು.

ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಡಿಸಿಗಳಿಗೆ ಪಿಡಿ ಖಾತೆಯಲ್ಲಿ ಹಣ ಕೊಟ್ಟಿದ್ದೇವೆ. ನಮ್ಮ ಜಿಲ್ಲೆಯಲ್ಲಿ 30 ಕೋಟಿ ರೂಪಾಯಿ ಇದೆ. ಇದರಲ್ಲೇ ನಿರ್ವಹಣೆ ಮಾಡುತ್ತಿದ್ದೇವೆ. ರಾಜ್ಯಕ್ಕೆ ಇನ್ನೂ ಹೆಚ್ಚಿನ ನೆರವು ಕೇಂದ್ರದ ಅಗತ್ಯವಿದೆ ಎಂದರು.

ಕೃಷಿ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದಿದ್ದರೆ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ಬೆಳೆ ತೆಗೆಯುವುದಕ್ಕೆ ಮಾಡುವ ಖರ್ಚು ಬಂದರೆ ತೃಪ್ತನಾಗುತ್ತಾನೆ. ರಾಗಿ, ಭತ್ತ, ಕಬ್ಬು, ಕೊಬ್ಬರಿ ಇರಬಹುದು. ನಾವು ಖರ್ಚು ಮಾಡಿದ ದುಡ್ಡು ಹುಟ್ಟುತ್ತಿಲ್ಲ.ಹಾಗಾಗಿ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಕ್ಕೆ ರೈತ ಹೋಗುತ್ತಾನೆ. ಕೇಂದ್ರ, ರಾಜ್ಯ ಸರ್ಕಾರ ಅನ್ನದಾತನ ರಕ್ಷಣೆ ಮಾಡಬೇಕು ಎಂದು ತಿಳಿಸಿದರು. ಕೊಬ್ಬರಿಗೆ ಬೆಂಬಲ ಬೆಲೆ ಕೊಡಬೇಕು. 11 ಸಾವಿರ ರೂ., ಕ್ವಿಂಟಾಲ್ ಕೊಬ್ಬರಿಗೆ ಇದೆ. ನಾವು ರಾಜ್ಯ ಸರ್ಕಾರ 1250 ರಿಂದ 1500 ರೂ., ಕೊಡುತ್ತಾ ಇದ್ದೀವಿ. ಇದು ಸಾಕಾಗುತ್ತಾ? ಕನಿಷ್ಟ 18 ಸಾವಿರ ರೂ., ಬೆಂಬಲ ಬೆಲೆ ಹೆಚ್ಚಳ ಮಾಡಬೇಕು.15 ಸಾವಿರ ಕೇಂದ್ರ ಕೊಡಲಿ, 3 ಸಾವಿರ ರಾಜ್ಯ ಕೊಡಲಿದೆ. ಒಟ್ಟು 18ಸಾವಿರ ರೂ., ರೈತನಿಗೆ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net