ಹೊಸ ವರ್ಷಕ್ಕೆ ಸಿಹಿಸುದ್ದಿ ನೀಡುತ್ತಾ ಕೇಂದ್ರ ?; ವೈಜಾಗ್ ಸ್ಟೀಲ್ ಕಾರ್ಖಾನೆ ಪುನಶ್ಚೇತನ !

RINL
Published on

ನವದೆಹಲಿ: ಬಹುತೇಕ ಖಾಸಗೀಕರಣದ ಹೊಸ್ತಿಲಲ್ಲಿದ್ದ ಭಾರತೀಯ ರಾಷ್ಟ್ರೀಯ ಉಕ್ಕು ನಿಗಮ (ಆರ್‌ಐಎನ್‌ಎಲ್) ವೈಜಾಗ್ ಸ್ಟೀಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವಿರತ ಪ್ರಯತ್ನ ಹೊಸ ವರ್ಷದ ಆರಂಭ ಫಲ ನೀಡುವ ಲಕ್ಷಣ ಕಂಡು ಬಂದಿದೆ. 2030ಕ್ಕೆ ದೇಶದ ಉಕ್ಕು ಉತ್ಪಾದನೆ ಪ್ರಮಾಣವನ್ನು 300 ದಶಲಕ್ಷ ಟನ್‌ಗೆ ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಗುರಿಯನ್ನು ಸಾಕಾರಗೊಳಿಸಲು ವೈಜಾಗ್ ಸ್ಟೀಲ್ ಕಾರ್ಖಾನೆ ಪುನಶ್ಚೇತನ ಮಹತ್ವದ ಹೆಜ್ಜೆಯಾಗಲಿದೆ. ಕಾರ್ಖಾನೆ ಪುನಶ್ಚೇತನ ಯೋಜನೆಯ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಜತೆ ಕೇಂದ್ರ ಉಕ್ಕು ಸಚಿವರು ವಿಸ್ತೃತ ಸಮಾಲೋಚನೆ ನಡೆಸಿದ್ದು, ‘ವಿಕಸಿತ ಭಾರತ 2047’ ಗುರಿ ತಲುಪಲು ಭಾರತೀಯ ಉಕ್ಕು ಕ್ಷೇತ್ರದ ಕೊಡುಗೆ ಪ್ರಮುಖವಾಗಲಿದೆ. ಪ್ರಧಾನಿಗಳ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರ ಸರಕಾರ ಕಾಯಕಲ್ಪ ನೀಡುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ. ಹಣಕಾಸು ಸಚಿವರು ಹಾಗೂ ಅಧಿಕಾರಿಗಳ ಜತೆಯೂ ಸುದೀರ್ಘ ಚರ್ಚೆಗಳು ನಡೆದಿದ್ದವು. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೂ ಹಲವು ಸುತ್ತಿನ ಮಾತುಕತೆ ನಡೆದಿತ್ತು.

ಭಾರತದ ಉಕ್ಕು ಉದ್ಯಮದ ಆಧಾರ ಸ್ತಂಭ

ವೈಜಾಗ್ ಸ್ಟೀಲ್ ಎಂದೇ ಪ್ರಸಿದ್ಧವಾಗಿರುವ ಆರ್‌ಐಎನ್‌ಎಲ್ ಪ್ರಾರಂಭದಿಂದಲೂ ಭಾರತದ ಉಕ್ಕು ಕ್ಷೇತ್ರದಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಕಾರ್ಯಾಚರಣೆಯ ಅಸಮರ್ಥತೆ ಮತ್ತು ಜಾಗತಿಕ ಮಾರುಕಟ್ಟೆ ಒತ್ತಡಗಳಿಂದಾಗಿ ತೀವ್ರ ಹಣಕಾಸು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದ ಕಾರ್ಖಾನೆಯನ್ನು ಪುನಚ್ಚೇತನಗೊಳಿಸುವುದರಿಂದ ಸಾವಿರಾರು ಕಾರ್ಮಿಕರ ಜೀವನೋಪಾಯ ಹಾಗೂ ದೇಶದ ಉಕ್ಕು ಉತ್ಪಾದನೆಯಲ್ಲಿ ಗಣನೀಯ ಪ್ರಗತಿ ಉಂಟಾಗಲಿದೆ. "ನಮ್ಮ ಪ್ರಯತ್ನ ಉಕ್ಕಿನ ಸ್ಥಾವರವನ್ನು ಪುನರುಜ್ಜೀವನಗೊಳಿಸುವುದಷ್ಟೇ ಅಲ್ಲ, ಸಾವಿರಾರು ಕಾರ್ಮಿಕ ಕುಟುಂಬಗಳ ಜೀವನೋಪಾಯ ಕಾಪಾಡುವುದು. ದೇಶೀಯ ಉಕ್ಕು ಉತ್ಪಾದನೆಯನ್ನು ಹೆಚ್ಚಿಸುವುದು, ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವುದು ನಮ್ಮ ಗುರಿ. ವೈಜಾಗ್ ಸ್ಟೀಲ್ ಭಾರತದ ಕೈಗಾರಿಕೆ ಕ್ಷೇತ್ರದ ಶಕ್ತಿ ಮತ್ತು ಹೆಮ್ಮೆಯ ಸಂಕೇತವಾಗಿದೆ." - ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net