

ಬೆಂಗಳೂರು: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖವಾದ ಭಾರತೀಯ ರೈಲ್ವೇಯ ಆನ್‌ಲೈನ್ ಟಿಕೆಟ್ ಬುಕಿಂಗ್ ಪೋರ್ಟಲ್ ಐಆರ್‌ಸಿಟಿಸಿ ಕಳೆದ ಕೆಲ ದಿನಗಳಿಂದ ತಾಂತ್ರಿಕ ದೋಷಕ್ಕೆ ಒಳಗಾಗಿದ್ದು, ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಕಳೆದ ಒಂದು ತಿಂಗಳಿಂದ ಐಆರ್‌ಸಿಟಿಸಿ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಎಷ್ಟೇ ಪ್ರಯತ್ನಿಸಿದರೂ ಸರಿಯಾಗಿ ಲಾಗಿನ್ ಆಗುತ್ತಿಲ್ಲ. ಗಂಟೆಗಟ್ಟಳೆ ರೀಬೂಟ್ ಆಗುವುದರಿಂದ ಗ್ರಾಹಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ತತ್ಕಾಲ್‌ನಲ್ಲಿ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ವೆಬ್‌ಸೈಟ್ ಲಾಗಿನ್ ಡಿಲೇ ಆಗುವುದು ಸಹಜ. ಆದರೆ ಕಳೆದೊಂದು ತಿಂಗಳಿನಿಂದ ಯಾವಾಗೆಂದರೆ ಆವಾಗ ವೆಬ್‌ಸೈಟ್ ಸ್ಲೋ ಆಗುತ್ತಿದೆ. ಇದರಿಂದ ಲಕ್ಷಾಂತರ ಭಾರತೀಯ ರೈಲ್ವೇ ಗ್ರಾಹಕರು ತೊಂದರೆ ಅನುಭವಿಸಿದ್ದಾರೆ.
ಎಸಿ ಕ್ಲಾಸ್ ತತ್ಕಾಲ್ ಟಿಕೆಟ್ ಬುಕ್ ಮಾಡಲು ಬೆಳಗ್ಗೆ 10 ಗಂಟೆಯಿಂದ ಅವಕಾಶವಿದೆ. ನಾನ್ ಎಸಿ ಸ್ಲೀಪರ್ ಅಥವಾ ಸಿಟ್ಟಿಂಗ್ ಕ್ಲಾಸ್ ಬುಕ್ ಮಾಡಲು 11 ಗಂಟೆಯಿಂದ ಅವಕಾಶವಿದ್ದು, ಮಂಗಳವಾರ ತತ್ಕಾಲ್‌ನಲ್ಲಿ ಟಿಕೆಟ್ ಬುಕ್ ಮಾಡಲು ಲಕ್ಷಾಂತರ ಜನ ಎಷ್ಟೇ ಪ್ರಯತ್ನಿಸಿದರೂ ಲಾಗಿನ್ ಆಗಿರಲಿಲ್ಲ. ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್ ಎರಡೂ ಕಡೆಗಳಲ್ಲೂ ಈ ದೋಷ ಕಂಡುಬಂತು. ಇದರಿಂದ ತೊಂದರೆಗೀಡಾದ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಧ್ಯಾಹ್ನದ ವೇಳೆಗೆ ಎರರ್ ಸರಿಪಡಿಸಿ ವೆಬ್‌ಸೈಟ್‌ನ್ನು ನಾರ್ಮಲ್ ಸ್ಥಿತಿಗೆ ತರಲಾಯಿತಾದರೂ ಅಷ್ಟರಲ್ಲಾಗಲೇ ಗ್ರಾಹಕರು ಟಿಕೆಟ್ ಬುಕ್ಕಿಂಗ್ ಪ್ರಯತ್ನದಿಂದ ಹಿಂದೆ ಸರಿದಿದ್ದರು.
ಐಆರ್‌ಸಿಟಿಸಿಯಿಂದಾದ ಅಡಚಣೆಯನ್ನು ಪ್ರಸ್ತಾಪಿಸಿ ಹಲವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಆದರೆ ಈ ವರೆಗೆ ಐಆರ್‌ಸಿಟಿಸಿ ಮಾತ್ರ ಸಮಸ್ಯೆಗೆ ನಿಗದಿತ ಕಾರಣ ಏನೆಂಬುದನ್ನು ತಿಳಿಸಿಲ್ಲ. ಹಾಗೂ ಪ್ರತಿಕ್ರಿಯೆಯನ್ನು ನೀಡಿಲ್ಲ.
-ಬಸವರಾಜ ಕೊರಲಗುಂಡಿ, ಪ್ರಯಾಣಿಕರು