

ವಿಜಯವಾಣಿ ಸುದ್ದಿಜಾಲ ಕಾರವಾರ
ಮತ್ಸ್ಯ ಸಂಪದ ಯೋಜನೆಯಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಮೀನುಗಾರಿಕೆ, ಹೈನುಗಾರಿಕೆ ಸಚಿವ ಪರುಶೋತ್ತಮ ರುಪಾಲಾ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಾಗರ ಪರಿಕ್ರಮ ನಾಲ್ಕನೇ ಹಂತದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಆರ್ಥಿಕತೆಯಲ್ಲಿ ಮೀನುಗಾರಿಗೆಯ ಪಾಲು ಸಿಗಬೇಕು. ಆ ಮೂಲಕ ಮೀನುಗಾರರ ಆರ್ಥಿಕತೆ ಅಭಿವೃದ್ಧಿಯಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆಯೇ ಎಂದು ನೋಡಲು ನಾನು ಬಂದಿದ್ದೇನೆ. ರೈತರಿಗೆ ಮಾತ್ರ ಮೀಸಲಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಮೀನುಗಾರರಿಗೆ ನೀಡಲಾಗುತ್ತಿದೆ. ಅದರ ಮೂಲಕ ಯಾವುದೇ ಭದ್ರತೆ ಇಲ್ಲದೇ ಸಾಲ ನೀಡಲಾಗುತ್ತಿದೆ.
ಪಶುಗಳಿಗೆ ಆಂಬುಲೆನ್ಸ್ ಇಡೀ ದೇಶಕ್ಕೆ ನೀಡಲು ಯೋಜಿಸಲಾಗಿದೆ. ಕರ್ನಾಟಕ ಆಗಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಪ್ರಚೀನ ಸಂಸ್ಕೃತಿ ಹಾಗೂ ಆಧುನಿಕ ತಾಂತ್ರಿಕತೆಗೂ ಕರ್ನಾಟಕ ಮಹತ್ವ ಇದೆ ಎಂದು ಶ್ಲಾಘಿಸಿದರು
ಮಾಜಾಳಿ, ಬೆಳಂಬರದಲ್ಲಿ ಮೀನುಗಾರಿಕೆ ಜಟ್ಟಿ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು.
ಮೀನುಗಾರಿಕೆ ಸಂಬಂಧ ಯಾವುದೇ ಕಾರ್ಯ ಮಾಡಲು ಮತ್ಸ್ಯ ಸಂಪದ ಯೋಜನೆಯಲ್ಲಿ ಅವಕಾಶವಿದೆ. ಇಡೀ ವಿಶ್ವದಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಸಬ್ಸಿಡಿ ಬಂದ್ ಮಾಡಬೇಕು ಎಂಬ ಚರ್ಚೆ ನಡೆದಿದೆ. ಭಾರತ ಮಾತ್ರ ಮೀನುಗಾರಿಕೆ ಕ್ಷೆತ್ರಕ್ಕೆ ಸಬ್ಸಿಡಿ ನೀಡಲು ಮುಂದಾಗಿದೆ ಎಂದರು. ರಾಜ್ಯ. ಖಾತೆ ಸಚಿವ ಡಾ.ಎಲ್.ಮುರುಗನ್, ರಾಜ್ಯ. ಮೀನುಗಾರಿಕೆ ಸಚಿವ ಎಸ್..ಅಂಗಾರ, ಶಾಸಕಿ ರೂಪಾಲಿ ನಾಯ್ಕ ಇದ್ದರು.