ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಶತಮಾನೋತ್ಸವ ಸಂಭ್ರಮ

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಶತಮಾನೋತ್ಸವ ಸಂಭ್ರಮ
Published on

ಹಾಸನ: ರಾಷ್ಟ್ರಭಾವ ಜಾಗೃತಗೊಳಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ. ಮನ ಮನೆಗಳನ್ನು ಬೆಸೆದುಕೊಳ್ಳುತ್ತಿರುವ ಸಂಘ ಚಿಂತನೆ ವ್ಯಾಪಿಸಿದ ಮತ್ತು ವ್ಯಾಪಿಸುತ್ತಿರುವ ರೀತಿ ಅನನ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅಭಿಪ್ರಾಯಪಟ್ಟರು.

ನಗರದ ಸೀತಾರಾಮಾಂಜನೇಯ ಕಲ್ಯಾಣ ಮಂಟಪದಲ್ಲಿ ಹಾಸನ ಮಂಥನ ಬಳಗದ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸಂಘದ ಶತ ಪಥ ನೂರರ ಹಾದಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘ ಹುಟ್ಟಿದ್ದು 1925ರ ವಿಜಯದಶಮಿಯ ದಿನದಂದು. ಡಾ.ಹೆಡಗೇವಾರ್ ಅವರ ಮನೆಯಲ್ಲೇ ಸಂಘ ಔಪಚಾರಿಕವಾಗಿ ಶುರುವಾಯಿತು. ಆರ್‌ಎಸ್‌ಎಸ್‌ನ ಮೊದಲ ದೈನಂದಿನ ‘ಶಾಖೆ’ 1926ರ ಮೇ 28 ರಿಂದ ಮೊಹಿತೇವಾಡಾ ಮೈದಾನದಲ್ಲಿ ಶುರುವಾಯಿತು. ವ್ಯಕ್ತಿ ನಿರ್ಮಾಣ ಆಗಬೇಕು ಎಂದರೆ ವ್ಯಕ್ತಿ ಸಮಾಜಮುಖಿಯಾಗಬೇಕು. ಸಮಾಜಮುಖಿಯಾಗುವಾಗ ಇರಬೇಕಾದ ಮನಸ್ಥಿತಿ ಸ್ವಾರ್ಥಕ್ಕಿಂತ ಹೆಚ್ಚು ಸಮಾಜವೇ ಮುಖ್ಯವಾಗಬೇಕು. ಎಲ್ಲದಕ್ಕೂ ಮೊದಲು ದೇಶವೇ ಇರಬೇಕು. ಈ ಚಿಂತನೆ ದೇಶದ ಅಭಿವೃದ್ಧಿಗೆ ಪೂರಕ. ಇದನ್ನೇ ಆರ್‌ಎಸ್‌ಎಸ್ ಮಾಡುತ್ತ ಬಂದಿದೆ. ಆದ್ದರಿಂದಲೇ ಇಂದು ಜಗತ್ತಿನ ಅತಿದೊಡ್ಡ ಸಂಘಟನೆಯಾಗಿ ಸಮಾಜದೊಳಗೆ ಒಂದಾಗಿ ಸಾಗಿದೆ ಎಂದರು.

ಸ್ವದೇಶಿ ಜೀವನ ದೃಷ್ಟಿ ಅಥವಾ ಪದ್ಧತಿಯನ್ನು ಕಟ್ಟಿ ಬೆಳೆಸುವ ಈ ಕಾರ್ಯ ಸುಲಭದ ಅಥವಾ ಸಣ್ಣ ಸಾಧನೆಯೂ ಅಲ್ಲ. ಆರ್‌ಎಸ್‌ಎಸ್ ಮಟ್ಟಿಗೆ ಹೂವಿನ ಹಾಸಿಗೆಯೂ ಆಗಿರಲಿಲ್ಲ. ನೂರಾರು ಸಾವಿರಾರು ಸ್ವಯಂಸೇವಕರ ತ್ಯಾಗ ಬಲಿದಾನಗಳಿವೆ. ನಮ್ಮ ದೇಶದ ಸ್ವಾತಂತ್ರೃ ಪೂರ್ವದಲ್ಲಿ ಜನರಲ್ಲಿ ರಾಷ್ಟ್ರ ಪ್ರಜ್ಞೆ ಮತ್ತು ರಾಷ್ಟ್ರ ಭಾವ ಜಾಗೃತಗೊಳಿಸುವ ಕೆಲಸ ಶುರುಮಾಡಿದ ಆರ್‌ಎಸ್‌ಎಸ್ ಇಂದಿಗೂ ಸಮಾಜ ವ್ಯಾಪಿಯಾಗಿ ಇದನ್ನು ಮಾಡುತ್ತಲೇ ಇದೆ ಎಂದರು.

ಹಿಂದು ಎಂದರೆ ಸರ್ವೇಷಾಂ ಅವಿರೋಧೇನ’ ಎಂಬಂತೆ ಹಿಂದುವಿನ ಘೋಷಣೆಯೇ ‘ಲೋಕಾ ಸಮಸ್ತಾ ಸುಖಿನೋ ಭವಂತು’. ಇಡೀ ವಿಶ್ವವೇ ಒಂದು ಕುಟುಂಬ’ ಎಂಬುದು ಹಿಂದುವಿನ ನಂಬಿಕೆ ಹಾಗೂ ನಡವಳಿಕೆ. ಭಾರತದ ಮಣ್ಣಿನ ಮಕ್ಕಳಾದ ಹಿಂದುಗಳಲ್ಲಿ ಜಾಗೃತಿ ಸುಧಾರಣೆ ಹಾಗೂ ಸಂಘಟನೆಗಳು ಭಾರತದ ಮೂಲ ಅಗತ್ಯತೆ ಅನಿವಾರ್ಯತೆ ಎಂಬುದು ಸಂಘದ ಮೂಲ ನಂಬಿಕೆ, ಇದರ ಮುಖಾಂತರ ಭಾರತದ ಸರ್ವಾಂಗೀಣ ವಿಕಾಸ ಸಾಧ್ಯ ಎಂಬುವುದು ಸಂಘದ ಚಿಂತನೆ ಎಂದರು.

ಯಾವುದೇ ಸ್ವಹಿತಾಸಕ್ತಿಯ ಫಲಾಪೇಕ್ಷೆ ಬಯಸದೆ, ಯಾರದೋ ಒತ್ತಡದ ಪ್ರೇರಣೆಯಿಂದ ಕೆಲಸ ಮಾಡದೆ ಸಮಾಜ ಮತ್ತು ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವವನು ಸ್ವಯಂಸೇವಕ. ಜಗತ್ತಿನ ಯಾವುದೇ ವಿಶ್ವವಿದ್ಯಾಲಯಗಳು ನೀಡದ ನೈತಿಕ ಶಿಕ್ಷಣ, ಸಾಮಾಜಿಕ ಬದ್ಧತೆ, ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ ಹೀಗೆ ಎಲ್ಲ ಸಂಸ್ಕಾರವನ್ನು ಸಂಘವೂ ಸ್ವಯಂ ಸೇವಕನಿಗೆ ನೀಡುತ್ತದೆ. ಹಾಗಾಗಿ ಅವನೊಬ್ಬ ಸಂಸ್ಕಾರಗಳ ಕೇಂದ್ರಬಿಂದು ಎಂದರು.

ಸ್ವಯಂ ಸೇವಕ ಎಲ್ಲ ಧರ್ಮವನ್ನು ಗೌರವದಿಂದ ಕಾಣುವ ಗುಣವುಳ್ಳವನಾಗಿದ್ದು ಇತರರಿಂದ ಹಿಂದು ಧರ್ಮಕ್ಕೆ ಧಕ್ಕೆಯಾದರೆ ಸಿಡಿದೆದ್ದು ತನ್ನ ಮಾತೃಧರ್ಮವನ್ನು ಕಾಪಾಡಲು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಸ್ವಯಂಸೇವಕನಿಗೆ ರಾಷ್ಟ್ರವೇ ಮೊದಲು, ಮಿಕ್ಕಿದ್ದೆಲ್ಲಾ ಆಮೇಲೆ. ರಾಷ್ಟ್ರೀಯವಾದವೇ ಸ್ವಯಂಸೇವಕನ ಸಿದ್ಧಾಂತ. ರಾಷ್ಟ್ರದ ಭದ್ರತೆಯ ವಿಷಯ ಬಂದರೆ ಯಾವುದೇ ವಿಷಯದಲ್ಲೂ ರಾಜೀಯಾಗದೆ ಪ್ರಾಣದ ಹಂಗು ತೊರೆದು ಹೋರಾಡುವ ಗುಣವುಳ್ಳವರು ಸ್ವಯಂಸೇವಕರಾಗಿತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯುವ ವೈದ್ಯ ಡಾ ನವೀನ್, ಆರ್‌ಎಸ್‌ಎಸ್ ಕಾರ್ಯಕರ್ತರಾದ ಕೆಂಪೇಗೌಡ, ಮಾಜಿ ಶಾಸಕ ಪ್ರೀತಮ್ ಗೌಡ, ವಿಶ್ವ ಹಿಂದು ಪರಿಷತ್ತಿನ ಮಹಿಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಹಿಂದು ಸಂಘಟನೆ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net