

ಬೆಂಗಳೂರು: ಪರಿಶಿಷ್ಟ ಜಾತಿಯ ಸಮೀಕ್ಷಾ ಕಾರ್ಯಗಳಲ್ಲಿ ಪ್ರಗತಿ ಸಾಧಿಸದ ನೌಕರರನ್ನು ಅಮಾನತುಗೊಳಿಸಲು ಹೊರಡಿಸಿರುವ ಆದೇಶ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಂದ್ರ ಸ್ಥಾನಕ್ಕೆ ಬಿಡುಗಡೆ ಮಾಡಲು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಕೋರಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್ಗೆ, ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘ ಪತ್ರ ಬರೆದು ಮನವಿ ಮಾಡಿದೆ.
ಪಾಲಿಕೆ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ತೆರಿಗೆ ಸಂಗ್ರಹ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ವಿಧಾನಸಭೆ, ಲೋಕಸಭೆ, ಪಾಲಿಕೆ, ಶಿಕ್ಷಕರ ಮತ್ತು ಪದವಿಧಾರರ ಚುನಾವಣೆಗಳಲ್ಲಿ ಯಾವುದೇ ಲೋಪ ಇಲ್ಲದಂತೆ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಜಾತಿಗಣತಿ ಸಮೀಕ್ಷೆಯಲ್ಲೂ ಚಾಚುತಪ್ಪದೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿರುವಾಗ, ಜಾತಿ ಜನಗಣತಿ ಸಮೀಕ್ಷೆಯಲ್ಲಿ ಪ್ರಗತಿ ಸಾಧಿಸದ ಕಂದಾಯ ವಸೂಲಿಗಾರರು, ಹಿರಿಯ ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರು ಸೇರಿ ಗ್ರೂಪ್ "ಡಿ' ವೃಂದದ ನೌಕರರನ್ನು ಏಕಾಏಕಿ ಅಮಾನತುಪಡಿಸಲು ಆದೇಶ ಹೊರಡಿಸಿರುವುದು ಸರಿ ಇಲ್ಲ ಎಂದು ಸಂದ ಅಧ್ಯಕ್ಷ ಎ.ಅಮೃತ್ರಾಜ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗಣತಿದಾರರು, ಮೇಲ್ವಿಚಾರರನ್ನು ಸೂಕ್ತ ತರಬೇತಿ ಪಡೆದು ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಸಮೀಕ್ಷಾ ಕಾರ್ಯದ ಪ್ರಾರಂಭದ ವೇಳೆ ಮೊಬೈಲ್ ಆ್ಯಪ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಂದಾಜು 7 ದಿನ ಸಮೀಕ್ಷೆ ಕಾರ್ಯ ಕುಂಠಿತವಾಗಿದೆ. ಕೆಲ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದ, ಸಮೀಕ್ಷಾ ಸಂಖ್ಯೆ ಪ್ರಮಾಣ ಕಡಿಮೆಯಾಗಿದೆ. ಬೇಸಿಗೆ ರಜೆ ಇರುವುದರಿಂದ ಆನೇಕ ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಸ್ವಂತ ಊರಿಗಳಿಗೆ ತೆರಳಿದ್ದಾರೆ. ಕೆಲವರು ಕೂಲಿ ಕಾರ್ಮಿಕರಾಗಿದ್ದಾರೆ. ಹಲವು ಕುಟುಂಬಗಳು ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಮೊಬೈಲ್ ಆ್ಯಪ್ ಪ್ರತಿ ನಿತ್ಯ ಸಂಜೆ 6.30ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ಕೆಲ ಕಾರಣಗಳಿಂದ ಸಮೀಕ್ಷಾ ಕಾರ್ಯ ಕುಂಠಿತವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.