ಕೆಎಸ್​ಎನ್​ಡಿಎಂಸಿಗೆ ಮೂಲಸೌಕರ್ಯ ಕೊರತೆ: ನೈಸರ್ಗಿಕ ವಿಕೋಪ ಮೇಲ್ವಿಚಾರಣೆಗೆ ಅಡ್ಡಿ

ksndmc
Published on

ಬೆಂಗಳೂರು: ಪೂರ್ಣವಧಿ ನಿರ್ದೇಶಕರು ನೇಮಿಸದಿರುವುದು, ಕೆಲ ಸಿಬ್ಬಂದಿಗೆ ವೇತನ ಸಿಗದಿರುವುದು, ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸದಿರುವುದೂ ಸೇರಿ ಇತರೆ ಮೂಲಸೌಕರ್ಯ ಕೊರತೆಯಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್​ಎನ್​ಡಿಎಂಸಿ) ನಲುಗಿದೆ.

1988ರಲ್ಲಿ ಬರಗಾಲ ಉಸ್ತುವಾರಿ ಕೋಶ (ಡಿಎಂಸಿ) ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. 2007ರಲ್ಲಿ ಕರ್ನಾಟಕ ರಾಜ್ಯ ನೆಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಂದು ಮರುನಾಮಕರಣ ಮಾಡಲಾಯಿತು. ಪ್ರವಾಹ, ಆಲಿಕಲ್ಲು, ಚಂಡಮಾರುತ, ಭೂಕಂಪ, ಭೂಕುಸಿತ, ಸುನಾಮಿ ಸೇರಿ ಇತ್ಯಾದಿ ಬಗ್ಗೆ ಸಂಸ್ಥೆ ಮೇಲ್ವಿಚಾರಣೆ ಮಾಡುತ್ತಿದೆ.

ಯಲಹಂಕದಲ್ಲಿ 10 ಎಕರೆ ಜಾಗದಲ್ಲಿ ಕೇಂದ್ರ ಕಚೇರಿ ಇದೆ. ಕಂದಾಯ, ಕೃಷಿ, ತೋಟಗಾರಿಕೆ, ಜಲ ಸಂಪನ್ಮೂಲ, ಇಂಧನ, ಗೃಹ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಮತ್ತು ನಿರ್ವಹಣಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ, ರೈತರಿಗೆ, ಮೀನುಗಾರರಿಗೆ ಸಕಾಲಿಕವಾಗಿ ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಮುನ್ನಚ್ಚರಿಕೆ, ಮಳೆ ಮುನ್ಸೂಚನೆ ಮಾಹಿತಿ ಒದಗಿಸುತ್ತಿದೆ. ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರ ಮತ್ತು ಇಸ್ರೋ ಸೇರಿ ಮುಂತಾದ ರಾಷ್ಟ್ರೀಯ ಕೇಂದ್ರಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತದೆ. ಇದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಖ್ಯಸ್ಥರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಪಾಧ್ಯರು. ಇತರೆ ಇಲಾಖೆಗಳು ಸೇರಿ ವೈಾನಿಕ ಸಂಸ್ಥೆಗಳ ಸದಸ್ಯರು ಸದಸ್ಯರಾಗಿದ್ದಾರೆ.ಆದರೆ, ಹಲವು ವರ್ಷಗಳಿಂದ ಈ ಸಂಸ್ಥೆಗೆ ಪೂರ್ಣವಧಿ ನಿರ್ದೇಶಕರು ಇಲ್ಲ. ಇದರಿಂದಾಗಿ ಆಡಳಿತ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದೆ.

ಸ್ವತಂತ್ರ್ಯ ಸಂಸ್ಥೆಯಾದ ಕೆಎಸ್​ಎನ್​ಡಿಎಂಸಿಗೆ ಹಲವು ವರ್ಷಗಳಿಂದ ಪ್ರಭಾರದಲ್ಲೇ ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ (ಕೆಎಸ್​ಎನ್​ಡಿಎಂಎ) ಆಯುಕ್ತರು ಕೆಎಸ್​ಎನ್​ಡಿಎಂಸಿಗೆ ಪ್ರಭಾರ ನಿರ್ದೇಶಕರಾಗಿ ಕಾರ್ಯಭಾರ ಮಾಡುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಮುಂಗಾರು ಆರ್ಭಟ ಹೆಚ್ಚಿದೆ. ನೆರೆ, ಪ್ರವಾಹ, ಭೂಕುಸಿತ ಸೇರಿ ಪ್ರಕೃತಿ ವಿಕೋಪದ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ಆಸ್ತಿ,ಪಾಸ್ತಿ ಕಾಪಾಡುವ ದೊಡ್ಡ ಜವಾಬ್ದಾರಿ ಸಂಸ್ಥೆಗೆ ಇದೆ. ಹಾಗಾಗಿ, ಇಂತಹ ಸಂಸ್ಥೆಗೆ ಪೂರ್ಣವಧಿ ನಿರ್ದೇಶಕರ ಅಗತ್ಯವಿದೆ.

ಕೆಟ್ಟುನಿಂತ ಮಳೆ ಮಾಪನ ಕೇಂದ್ರಗಳು

ಕೇಂದ್ರವು ಪ್ರತಿ 25 ಚದರ ಕಿ.ಮೀ.ನಲ್ಲಿ 6,500 ಟೆಲಿಮೆಟ್ರಿಕ್​ ಮಳೆ ಮಾಪಕಗಳನ್ನು ಹೊಂದಿದೆ. ಇದು ಪ್ರತಿ 15 ನಿಮಿಷಕ್ಕೊಮ್ಮೆ ಮಳೆ ಮಟ್ಟ ಅಳೆಯುತ್ತದೆ. 850 ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಮತ್ತು 11 ಮಿಂಚಿನ ಸಂವೇದಕ ಸ್ಥಾಪಿಸಲಾಗಿದೆ. ಮುಂಬರುವ ಅಪಾಯ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದೆ. ಮಿಂಚಿನ ಸಂವೇದಕಗಳು 15-20 ನಿಮಿಷಗಳ ಮುಂಚಿತವಾಗಿ ಮಿಂಚು ಅಪ್ಪಳಿಸಬಹುದಾದ ದುರ್ಬಲ ಸ್ಥಳಗಳನ್ನು ಪತ್ತೆಹಚ್ಚುವ ತಂತ್ರಜ್ಞಾನ ಹೊಂದಿದೆ. ಸಾಕಷ್ಟು ಟೆಲಿಮೆಟ್ರಿಕ್​ ಮಳೆ ಮಾಪಕ ಕೇಂದ್ರಗಳು ಹಳೆಯದಾಗಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿವೆ. ಇದರಿಂದಾಗಿ ರೈತರಿಗೆ ಸೂಕ್ತ ವಿಮಾ ಮೊತ್ತ ಸಿಗದಂತಾಗಿದೆ.

ವೇತನ ಸಿಗದೆ ಪರದಾಟ

ಕೆಎಸ್​ಎನ್​ಡಿಎಂಸಿನಲ್ಲಿ ಹಗಲಿರುಳು ಕೆಲಸ ಮಾಡುವ 30ಕ್ಕೂ ಅಧಿಕ ಎಚ್​ಆರ್​ಎಂಎಸ್​ ಸಿಬ್ಬಂದಿ 3 ತಿಂಗಳಿಂದ ವೇತನ ಸಿಗದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net