

ಆಲೂರು: ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಜನ ಹೃದಯಾಘಾತದಿಂದ ಸಾವಿಗೀಡಾದ ಪ್ರಕರಣ ಹಿನ್ನೆಲೆ ಶಾಸಕ ಸಿಮೆಂಟ್ ಮಂಜು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಗುರುವಾರ ಒಂದೇ ದಿನ ಸಕಲೇಶಪುರ, ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ವರು ಹೃದಯಾಘಾತದಿಂದ ಮೃತಪಟ್ಟಿದ್ದು, ಜನ ಸಹಜವಾಗಿಯೇ ಆತಂಕಕ್ಕೀಡಾಗಿದ್ದಾರೆ. ಈ ಹಿನ್ನಲೆ ಗುರುವಾರ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.
ಜಿಲ್ಲೆಯಲ್ಲಿ ಚಿಕ್ಕವಯಸ್ಸಿನವರು ಯಾಕೆ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನುರಿತ ತಜ್ಞರ ಮೂಲಕ ಆದಷ್ಟು ಬೇಗ ಕಂಡುಹಿಡಿಯಬೇಕು. ಹೃದಯಘಾತದ ಪ್ರಕರಣ ಯುವಜನತೆಯಲ್ಲಿ ಭಾರಿ ಆತಂಕ ಮೂಡಿದೆ ಎಂದ ಅವರು ಪ್ರಕರಣದ ತನಿಖೆಗೆ ಸರ್ಕಾರ ವೈದ್ಯರ ತಂಡ ರಚಿಸಿರುವುದು ತಿಳಿದಿದೆ. ವರದಿಯನ್ನು ಆದಷ್ಟು ಬೇಗ ತರಿಸಿಕೊಂಡು ಹೃದಯಘಾತದ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚಾಗಿವೆ. ರೋಗಿಗಳು ತುರ್ತು ಚಿಕಿತ್ಸೆಗಾಗಿ 40-50ಕಿ.ಮೀ. ದೂರದಿಂದ ಜಿಲ್ಲಾ ಕೇಂದ್ರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕ್ಷೇತ್ರದ ಪ್ರತಿ ಹೋಬಳಿ ಕೇಂದ್ರದಲ್ಲಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಆಂಬುಲೆನ್ಸ್ ವಾಹನಗಳನ್ನು ನೀಡಬೇಕೆಂದು ಮನವಿ ಮಾಡಿದರು.