

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉದ್ಯಮಿಗಳು ಕನಸುಗಳನ್ನು ಕಾಣಬೇಕು, ಆ ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು. ಈ ಕನಸುಗಳು ನನಸಾಗಿಸಲು ಸಮಯ ಬೇಕು, ತಾಳ್ಮೆ ಇರಬೇಕು, ಕನಸುಗಳು ನಮ್ಮನ್ನು ಬೆಳೆಸುತ್ತವೆ. ದುಂದುವೆಚ್ಚಗಳಿಂದ ಮತ್ತು ದುಶ್ಚಟಗಳಿಂದ ದೂರ ಇರಬೇಕು. ರುಡ್‌ಸೆಟ್ ಸಂಸ್ಥೆಯಿಂದ ಅನೇಕ ನಿರುದ್ಯೋಗಿಗಳು ಸ್ವಉದ್ಯೋಗವನ್ನು ಮಾಡಿ ಉದ್ಯಮಿಗಳಾಗಿರುವುದು ತುಂಬಾ ಸಂತೋಷ ಕೊಟ್ಟಿದೆ ಎಂದು ಬದುಕು ಕಟ್ಟೋಣ ಬನ್ನಿ ಸಂಚಾಲಕ ಮತ್ತು ಉದ್ಯಮಿ ಮೋಹನ್ ಕುಮಾರ್ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯ ಮೊಬೈಲ್ ರಿಪೇರಿ ತರಬೇತಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಕಚೇರಿ ಸಹಾಯಕಿ ರಶ್ಮಿ ವಂದಿಸಿದರು.
30 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ 27 ಯುವಕರು ಭಾಗವಹಿಸಿದರು. ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.