

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದ ರೈತರು ಮಂಗಳವಾರ ಸಂಜೆ ರಂಗೋಲಿ ಬಿಡಿಸಿ, ಕೊಳಗ, ಕಬ್ಬು, ನೊಗ, ನೇಗಿಲುಗಳನ್ನು ಇಟ್ಟು, ದೇಸಿ ತಳಿಯ ದನಕರುಗಳನ್ನು ಪೂಜಿಸಿ, ಕಿಚ್ಚು ಹಾಯಿಸುವ ಮೂಲಕ ವಿಶಿಷ್ಟವಾಗಿ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಆಚರಿಸಿ ಸಂಭ್ರಮಿಸಿದರು.
ಹೊನ್ನೂರು ಗ್ರಾಮದ ರೈತರ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮನೆಯ ಆವರಣದಲ್ಲಿ ರೈತಸಂಘ, ಹಸಿರುಸೇನೆ, ನೈಸರ್ಗಿಕ ಸಾವಯವ ರೈತ ಸಂಘ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ರಾಗಿ ಹಾಗೂ ಭತ್ತ, ಸಿರಿಧಾನ್ಯಗಳನ್ನು ರಾಶಿ ಮಾಡಲಾಗಿತ್ತು. ಇದರೊಂದಿಗೆ ದಿನನಿತ್ಯ ಹೊಲ ಉಳುಮೆ ಮಾಡಲು ಬಳಕೆ ಮಾಡುವ ನೊಗ ನೇಗಿಲುಗಳನ್ನು ಇಟ್ಟು ಹೂವಿನಿಂದ ಸಿಂಗರಿಸಿ, ಆರತಿ ಬೆಳಗಲಾಯಿತು. ಇದರೊಂದಿಗೆ ಗಿರ್ ಸೇರಿದಂತೆ ದೇಸಿ ತಳಿಗಳ ದನಕರುಗಳನ್ನು ತಂದು ಅದಕ್ಕೂ ಸಿಂಗರಿಸಿ ಪೂಜೆ ಮಾಡಲಾಯಿತು.
ನಂತರ ಭತ್ತದ ಹುಲ್ಲನ್ನು ಹಾಕಿ ಅದಕ್ಕೆ ಬೆಂಕಿ ಹಚ್ಚಿ ಉಳುಮೆ ಮಾಡುವ ಎತ್ತುಗಳನ್ನು ಎಳೆದು ಕಿಚ್ಚನ್ನು ಹಾಯಿಸಿ ಸಂಭ್ರಮ ಪಟ್ಟರು. ಈ ಸಂದರ್ಭದಲ್ಲಿ ಹೊನ್ನೂರು ಪ್ರಕಾಶ್ ಮಾತನಾಡಿ, ಸಂಕ್ರಾಂತಿ ಹಬ್ಬ ದಕ್ಷಿಣ ಭಾರತದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಸುಗ್ಗಿಯ ಕಾಲದಲ್ಲಿ ಬರುವ ಈ ಹಬ್ಬ ರೈತರ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ. ಆದರೆ, ನಾವು ಇಂದು ದೇಸಿ ತಳಿ ಹಾಗೂ ಸಾವಯವ ಕೃಷಿಯನ್ನು ಬಿಟ್ಟಿದ್ದೇವೆ. ಸಿರಿಧಾನ್ಯಗಳ ಬಳಕೆ ಕಡಿಮೆಯಾಗಿದೆ. ದುಡಿಯುವ ರೈತ ಆರೋಗ್ಯವಂತನಾಗಿದ್ದರೆ ದೇಶವೇ ಆರೋಗ್ಯವಾಗಿರುತ್ತದೆ. ಹಾಗಾಗಿ ಪ್ರತಿ ರೈತರು ತಮ್ಮ ಜಮೀನಿನಲ್ಲಿ ತಮಗೋಸ್ಕರ ಸಾವಯವ ಕೃಷಿ ಪದ್ಧತಿಯಲ್ಲಿ ಆಹಾರಧಾನ್ಯಗಳನ್ನು ಬೆಳೆದು ಬಳಸಬೇಕು. ಹಿಂದಿನ ಸಂಪ್ರದಾಯವನ್ನು ಮರುಕಳಿಸುವಲ್ಲಿ ಇದೊಂದು ಸಣ್ಣ ಪ್ರಯತ್ನವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಪುಟ್ಟಬಸವಯ್ಯ, ಸಿದ್ದಲಿಂಗಸ್ವಾಮಿ ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು.