

ಮದ್ದೂರು: ರೈತರ ಹಾಗೂ ಪ್ರಗತಿಪರ ಸಂಘನೆಗಳ ವಿರೋಧದ ನಡುವೆಯೂ ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡಲು ಹೊರಟಿದ್ದ ಸರ್ಕಾರಕ್ಕೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದು ಸಂತೋಷ ತಂದಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು ಹರ್ಷ ವ್ಯಕ್ತಪಡಿಸಿದರು.
ತಾಲೂಕಿನ ಬೆಸಗರಹಳ್ಳಿಯಲ್ಲಿ ಶನಿವಾರ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಸಂಭ್ರಮಾಚರಣೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದನ್ನು ವಿರೋಧಿಸಿ ರೈತ ಸಂಘ ಸೇರಿದಂತೆ ಜಿಲ್ಲೆಯ ಅನೇಕ ಸಂಘಟನೆಗಳು ಹಲವಾರು ಪ್ರತಿಭಟನೆಗಳನ್ನು ಮಾಡಲಾಗಿತ್ತು ಹಾಗೂ ಈ ಸಂಬಂಧ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಈ ಯೋಜನೆಯನ್ನು ಕೈ ಬಿಡಲು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು ಎಂದರು.
ಸರ್ಕಾರ ಕೆಆರ್‌ಎಸ್ ಬಳಿ ಯಾವುದೇ ಕಾಮಗಾರಿ ಮಾಡದಂತೆ ನ್ಯಾಯಾಲಯದ ಆದೇಶ ಹೊರಡಿಸಿದ್ದು ಇದರಿಂದ ಜಿಲ್ಲೆಯ ಜನರ ಮತ್ತು ಹೋರಾಟಗಾರರಿಗೆ ಸಿಕ್ಕ ಜಯ. ಆದ್ದರಿಂದ ಈ ಸಂದರ್ಭದಲ್ಲಿ ಬೆಸಗರಹಳ್ಳಿ ಮತ್ತು ಕೊಪ್ಪ ರೈತ ಸಂಘದ ವತಿಯಿಂದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ಇಂತಹ ಅವೈಜ್ಞಾನಿಕ ಯೋಜನೆಗಳನ್ನು ಸರ್ಕಾರ ಮಾಡುವ ನಿರ್ಧಾರವನ್ನು ಕೈಬಿಡಬೇಕು. ಜಿಲ್ಲೆಯ ಜನರ ಹಿತ ಕಾಪಾಡಲು ಮುಂದಾಗಬೇಕು. ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಂಬಾಡಿ ಕಟ್ಟೆಯ ಉಳಿವಿಗಾಗಿ ಇಂತಹ ಆಲೋಚನೆಗಳು ಸಮಂಜಸವಲ್ಲ ಎಂದರು.
ಸಭೆಯಲ್ಲಿ ರೈತ ಮುಖಂಡರಾದ ಕೀಳಗಟ್ಟ ನಂಜುಂಡಯ್ಯ, ವೆಂಕಟೇಶ್, ಪಣ್ಣೆದೊಡ್ಡಿ ಶಿವಲಿಂಗಯ್ಯ, ಉಮೇಶ್, ರಮೇಶ್, ಕೃಷ್ಣ, ಶ್ರೀನಿವಾಸ್, ರಾಮಣ್ಣ, ದಯಾನಂದ್, ಮಲಿರ್ಂಗಯ್ಯ, ಲಿಂಗರಾಜು ಇದ್ದರು.