ತಡಗವಾಡಿಯಲ್ಲಿ ಬಾಬಯ್ಯನ ಹಬ್ಬ ಆಚರಣೆ

SRP_18-03(a)jpj
Published on

ಶ್ರೀರಂಗಪಟ್ಟಣ: ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಮೊಹರಂ ಕಡೆಯ ದಿನದ ಪ್ರಯುಕ್ತ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಹಿಂದು-ಮುಸ್ಲಿಂ ಭಾವೈಕ್ಯತೆಯ ಬಾಬಯ್ಯನ ಹಬ್ಬವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು.


ಗ್ರಾಮದ ಹೃದಯ ಭಾಗದಲ್ಲಿರುವ ಬಾಬಯ್ಯ ದೇಗುಲದಲ್ಲಿ ಮಂಗಳವಾರ ಸಂಜೆ ದೇವರ ಗುಡ್ಡಪ್ಪ ಬಾಬಯ್ಯನ ಹಸ್ತ ಹಾಗೂ ಖಡ್ಗಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊತ್ತು ಫಕೀರರೊಂದಿಗೆ ರಾತ್ರಿಪೂರ ಮೆರವಣಿಗೆ ನಡೆಸಿದರು. ಈ ವೇಳೆ ಮನೆ ಮನೆಗಳ ಮುಂದೆ ಆಗಮಿಸಿದ ಬಾಬಯ್ಯನ ಗುಡ್ಡಪ್ಪನಿಗೆ ಬಿಂದಿಗೆಯಲ್ಲಿ ನೀರು ಸುರಿದು ತಂಪು ತೋರಿದ ಮಹಿಳೆಯರು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಬುಧವಾರ ಮುಂಜಾನೆ ದೇಗುಲದ ಮುಂಭಾಗ ನಿರ್ಮಿಸಿದ ಅಗ್ನಿ ಕುಂಡದ ಸುತ್ತ ಗ್ರಾಮದ ಹಿಂದು ಧರ್ಮದ ಪುರುಷರು ಕಿಂದರಿ ಟೋಪಿ ಧರಿಸಿ ಕೊಡಂಗಿ ವೇಷ ಹಾಕಿ, ಮೈಗೆ ಕಪ್ಪು ಮಸಿ ಬಳಿದುಕೊಂಡು ಅಗ್ನಿ ಕುಂಡದ ಸುತ್ತಲು ಹಸನ್-ಹುಸೇನ್ ಎಂಬ ಘೋಷಣೆಗಳೋಂದಿಗೆ ತಮಟೆ ಸದ್ದಿಗೆ ಕುಣಿದು ಪರಸ್ಪರ ಚಾವಟಿಗಳಲ್ಲಿ ಹೊಡೆದುಕೊಂಡರು. ತಮ್ಮ ಇಷ್ಟಾರ್ಥ ಪ್ರಾಪ್ತಿಗೆ ಹಲವು ಅಗ್ನಿ ಕುಂಡಕ್ಕೆ ಕೊಬ್ಬರಿ ಹರಳು ಸಮರ್ಪಿಸಿ ಪ್ರಾರ್ಥಿಸಿದ್ದು, ಪೂಜಾ ವಿಧಿ ವಿಧಾನದ ಬಳಿಕ ಬಾಬಯ್ಯನ ಗುಡ್ಡಪ್ಪ ಕೊಂಡ ಹಾಯ್ದುರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net