

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿ ದೊಡ್ಡೇನಹಳ್ಳಿ ಮತ್ತು ಮಲಿದೇವಿಹಳ್ಳಿ ಗ್ರಾಮದ ವತಿಯಿಂದ ಗುರುವಾರ ಸಿಡಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಸಂಪ್ರದಾಯದಂತೆ ಮಲಿದೇವಿಹಳ್ಳಿ ಗ್ರಾಮದಿಂದ ರಥೋತ್ಸವಕ್ಕೆ ಗ್ರಾಮ ದೇವತೆ ಪ್ಲೇಗನಮ್ಮನ ಸಿಡಿ ಕುಂಭವನ್ನು ಭಕ್ತಿ ಪೂಜಾ ಕೈಂಕರ್ಯದೊಂದಿಗೆ ಪಾನಕ, ಫಲಾಹಾರ ಹಂಚಿ ದಾರಿಯುದ್ದಕ್ಕೂ ದೇವಿಯ ಸ್ಮರಣೆ ಮಾಡಲಾಯಿತು. ದೊಡ್ಡೇನಹಳ್ಳಿ ಗ್ರಾಮ ದೇವರಾದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ರಂಗನಾಥಸ್ವಾಮಿ, ಶ್ರೀ ವೀರಭದ್ರೇಶ್ವರಸ್ವಾಮಿ ಹಾಗೂ ಮಲಿದೇವಿಹಳ್ಳಿ ದೂತರಾಯ ನೇತೃತ್ವದಲ್ಲಿ ಸಿಡಿಕುಂಭದಲ್ಲಿ ದೇವರನ್ನು ಕುಳ್ಳಿರಿಸಿ ಭಕ್ತರು ಕುಣಿದು ಧನ್ಯತಾ ಭಾವ ಮೆರೆದರು.
ಜಾಡಘಟ್ಟ, ಬೇಲವಂತಹಳ್ಳಿ, ಮಲಿದೇವಿಹಳ್ಳಿ, ನಾಗೇನಹಳ್ಳಿ ಸೇರಿದಂತೆ ಇತರ ಊರಿನ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಅನ್ನದಾಸೋಹ ನಡೆಯಿತು.