

ಸೋಮವಾರಪೇಟೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೂತಿ ಗ್ರಾಮದ ನಾಗರತ್ನ ಕುಮಾರಪ್ಪ ಅವರ ಗದ್ದೆಯಲ್ಲಿ ಪತ್ರಕರ್ತರಿಗೆ ಭಾನುವಾರ ಏರ್ಪಡಿಸಿದ್ದ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪತ್ರಕರ್ತರು ಸಸಿ ನಾಟಿ ಮಾಡುವ ಮೂಲಕ ಸಂಭ್ರಮಿಸಿದರು.
ಧಾರಾಕಾರ ಮಳೆಯ ನಡುವೆ ಪತ್ರಕರ್ತರು ಮತ್ತು ಗ್ರಾಮದ ಪ್ರಮುಖರು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಎರಡು ಗದ್ದೆಗಳ ನಾಟಿ ಮುಗಿಸಿ ಸೈ ಎನಿಸಿಕೊಂಡರು. ಭತ್ತ ನಾಟಿ ಕಾರ್ಯಕ್ರಮದಲ್ಲಿ ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ.ಜಯರಾಮ್, ಉಪಾಧ್ಯಕ್ಷ ಕೆ.ಡಿ.ಗಿರೀಶ್, ಮಾಜಿ ಅಧ್ಯಕ್ಷ ಎಚ್.ಡಿ.ಮೋಹನ್ ಪತ್ರಕರ್ತರಿಗೆ ನಾಟಿ ಮಾಡುವ ವಿಧಾನವನ್ನು ವಿವರಿಸಿದರು.
ಈ ಹಿಂದೆ ಭತ್ತ ಕೃಷಿ ಪ್ರಧಾನ ಕೃಷಿಯಾಗಿತ್ತು. ರೈತ ಕುಟುಂಬಗಳು ಭತ್ತ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಭತ್ತ ಕೃಷಿ ಲಾಭದಾಯಕವಾಗಿಲ್ಲ ಎಂಬ ಕಾರಣದಿಂದ ಅನೇಕರು ಭತ್ತ ಭೂಮಿಯನ್ನು ಸಮತಟ್ಟು ಮಾಡಿ ಕಾಫಿ, ಅಡಕೆ ಬೆಳೆಯಲು ಪ್ರಾರಂಭಿಸಿದ್ದಾರೆ ಎಂದು ಅಧ್ಯಕ್ಷ ಜಯರಾಮ್ ಹೇಳಿದರು.
ಕಾಡುಕೋಣ, ಕಾಡೆಮ್ಮೆ, ಕಾಡುಹಂದಿಗಳು ಕಾಟದಿಂದ ಅನೇಕರು ಭತ್ತ ಕೃಷಿಯನ್ನು ಕೈಬಿಟ್ಟಿದ್ದಾರೆ. ಕಾರ್ಮಿಕರ ಕೊರತೆ, ಅಕಾಲಿಕ ಮಳೆ, ಉತ್ಪಾದನಾ ವೆಚ್ಚ ಹೆಚ್ಚಳ ಇವೆಲ್ಲಾ ಕಾರಣದಿಂದ ಭತ್ತ ಬೇಸಾಯವನ್ನು ರೈತರು ಕೈಬಿಡುತ್ತಿದ್ದಾರೆ. ಇದರಿಂದ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಹಿನ್ನೆಡೆಯಾಗುತ್ತಿದೆ ಎಂದು ವಿವರಿಸಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವಿಜಯ್ ಹಾನಗಲ್ ಮಾತನಾಡಿ, ನಷ್ಟದ ನಡುವೆ ಭತ್ತ ಕೃಷಿಯನ್ನು ಕೆಲ ರೈತರು ಮುಂದುವರಿಸುತ್ತಿರುವುದು ಶ್ಲಾಘನೀಯವಾದದು. ಗ್ರಾಮೀಣ ಯುವಕರು ನಗರ ಪ್ರದೇಶದಲ್ಲಿ ನೌಕರಿ ಮಾಡುತ್ತಿರುವ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ನಾಟಿ ಸಂದರ್ಭ ಗ್ರಾಮಕ್ಕೆ ಬಂದು ಭತ್ತ ಕೃಷಿ ಮುಂದುವರಿಸಬೇಕು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಕುಂಬೂರು ವಿಶ್ವ, ಕಾರ್ಯದರ್ಶಿ ಮಾಲಂಬಿ ದಿನೇಶ್, ಪದಾಧಿಕಾರಿಗಳಾದ ಲಕ್ಷ್ಮೀಕಾಂತ್, ಹಿರಿಕರ ರವಿ, ಮುಳ್ಳೂರು ಭಾಸ್ಕರ್ ಗ್ರಾಮಸ್ಥರಾದ ಎಚ್.ಡಿ.ಮೋಹನ್, ಡಿ.ಎಸ್.ಸೋಮಶೇಖರ್, ಸಿ.ಜೆ.ಸಂದೀಪ್, ನವೀನ್ ಕುಮಾರ್, ಅಭಿಷೇಕ್, ಚರಣ್ ಇದ್ದರು.