ವಿಭಿನ್ನ, ವಿಶಿಷ್ಟವಾಗಿ ಮಾರಮ್ಮನ ಹಬ್ಬ ಆಚರಣೆ

Oplus_131072
Oplus_131072
Published on

ಯಳಂದೂರು: ಪೊಲೀಸ್‌ನನ್ನು ಹಿಡಿಯುವ ಕಳ್ಳ, ಮನೆಗಳಿಗೆ ನುಗ್ಗುವ ದರೋಡೆ ಕೋರರು, ಕತ್ತಿಗೆ ಮಾನವನ ಅಸ್ಥಿಪಂಜರಗಳ ಸರವನ್ನು ಧರಿಸಿ ಭಯಾನಕ ಕಣ್ಣುಗಳಿಂದ ಮಾಟ ಮಂತ್ರ ಮಾಡುವ ಮಂತ್ರವಾದಿಗಳು, ಹುಡುಗಿಯರನ್ನು ಛೇಡಿಸಿ ಹಿಂಬಾಲಿಸಿ ಇವರ ಹಿಂಬೀಳುವ ಹುಡುಗರ ಗುಂಪು.

ತಾಲೂಕಿನ ಕಂದಹಳ್ಳಿ ಗ್ರಾಮದ ಉಪ್ಪಾರ ಜನಾಂಗದವರು ಮೂಗೂರು ಪಟ್ಟದ ರಾಣಿ ಮಾರಮ್ಮನ ಹಬ್ಬ ಪ್ರಯುಕ್ತ ಶುಕ್ರವಾರ ಕಂಡು ಬಂದ ದೃಶ್ಯಗಳು ಇವು! ಆದರೆ ಈ ಎಲ್ಲ ವೇಷಗಳನ್ನು ಧರಿಸುವವರು ಇಲ್ಲಿನ ಹುಡುಗರೇ, ಯುವತಿಯ ಧಿರಿಸು ಧರಿಸಿ, ಬಣ್ಣ ಬಣ್ಣದ ವೇಷ ತೊಟ್ಟು, ಈ ಹಬ್ಬವನ್ನು ಆಚರಿಸುವುದು ಇಲ್ಲಿನ ವಿಶೇಷವಾಗಿದೆ.

3 ದಿನಗಳು ನಡೆಯುವ ಈ ಹಬ್ಬ ಮೊದಲನೇ ದಿನ ಸತ್ತಿಗೆ, ಸೂರಪಾನಿ, ಹಾಗೂ ಮಾರಮ್ಮ ದೇವಿಯ ವಿಗ್ರಹವನ್ನು ಸಿಂಗರಿಸಿ ಆ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತಯಾರಿಸಿದ ತಂಬಿಟ್ಟುಗಳನ್ನು ದೇವರಿಗೆ ಅರ್ಪಿಸುವ ಮೂಲಕ ಹಬ್ಬ ಆಚರಿಸುವ ವಾಡಿಕೆ ನಡೆಯಿತು. ಎರಡನೇ ದಿನ ಗ್ರಾಮದಲ್ಲಿ ವಿಶೇಷ ಪೂಜೆ ಮಾಡಿ ಬರುವ ನೆಂಟರಿಷ್ಟರಿಗೆ ಅನ್ನಸಂತರ್ಪಣೆ ಮಾಡುವ ಪರಿಪಾಠವನ್ನು ಸಾಂಗವಾಗಿ ನಡೆಸಲಾಯಿತು.

ಮೂರನೇ ದಿನವಾದ ಶುಕ್ರವಾರ ಗ್ರಾಮದ ಯುವಕರು ಪ್ರತಿ ವರ್ಷದಂತೆ ಈ ಬಾರಿಯೂ ಪೊಲೀಸ್, ಕಳ್ಳ, ಹುಲಿವೇಷ, ರಾಜರು ಹಾಗೂ ಹುಡುಗಿಯರ ವೇಷ, ಮಂತ್ರವಾದಿಗಳೂ ಸೇರಿದಂತೆ ವಿಶಿಷ್ಟ ಧಿರಿಸುಗಳನ್ನು ಧರಿಸಿ ಗ್ರಾಮದ ಬೀದಿಗಳಲ್ಲಿ ಸಂಚರಿಸಿ, ಪರಸ್ಪರ ಬಣ್ಣ ಬಳಿದುಕೊಂಡು ಸಂಭ್ರಮಿಸುತ್ತಾರೆ. ನಂತರ ಗ್ರಾಮದ ಚಾವಡಿ ಬಳಿ ಆಳೆತ್ತರಕ್ಕೆ ಗುಂಡಿ ತೋಡಿ, ಇದಕ್ಕೆ ನೀರು ತುಂಬಿಸಲಾಗುತ್ತದೆ. ಈ ಹೊಂಡದಲ್ಲಿ ವೇಷ ಧರಿಸಿದ ಪ್ರತಿಯೊಬ್ಬರೂ ಹಾಗೂ ಗ್ರಾಮದ ಯುವಕರು, ಮಕ್ಕಳು, ವಯಸ್ಕರೂ ಸೇರಿದಂತೆ ವಯಸ್ಸಿನ ಪರಿಮಿತಿ ಇಲ್ಲದೆ ಈ ಹೊಂಡದಲ್ಲಿ ಮುಳುಗೇಳುವ ಸಂಪ್ರದಾಯ ನೆರವೇರಿಸಿದರು.

ಹಬ್ಬದ ನಿಮಿತ್ತ ಗ್ರಾಮದ ಬೀದಿಗಳಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದವು. ಹಬ್ಬಕ್ಕೆ ಆಗಮಿಸಿದ್ದ ಸಂಬಂಧಿಕರು ಗ್ರಾಮದ ವಿಶಿಷ್ಠ ಹೋಳಿಯಾಟ ವೀಕ್ಷಿಸುವ ಮೂಲಕ ಗ್ರಾಮದಲ್ಲಿ ವಿಭಿನ್ನವಾಗಿ ಮಾರಮ್ಮನ ಹಬ್ಬವನ್ನು ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net