

ಬೇಲೂರು: ದೇಶದಲ್ಲಿ ಹನುಮ ಜಯಂತಿಯನ್ನು ಹೇಗೆ ಆಚರಿಸುತ್ತೇವೋ ಹಾಗೆಯೇ ದತ್ತ ಪೀಠದ ಶೋಭಾಯಾತ್ರೆಯನ್ನೂ ಆಚರಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಶನಿವಾರ ಮತ್ತು ಭಾನುವಾರ ದತ್ತಪೀಠದ ತಪ್ಪಲಿನಲ್ಲಿರುವ ದತ್ತಾತ್ರೇಯ ಪಾದುಕೆ ದರ್ಶನಕ್ಕಾಗಿ ಸಕಲೇಶಪುರ, ಬೇಲೂರು ತಾಲೂಕಿನಿಂದ ದತ್ತಮಾಲೆ ಧರಿಸಿ ಜನರು ಹೊರಟಿದ್ದ ಶೋಭಾಯಾತ್ರೆಗೆ ಶನಿವಾರ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗಿ ರೈತರು ಸಮೃದ್ಧರಾದರೆ ದೇಶವು ಸುಭಿಕ್ಷವಾಗುತ್ತದೆ. ತಾಯಿ ಅನ್ನಪೂರ್ಣೇಶ್ವರಿಯ ಆಶೀರ್ವಾದ ಎಲ್ಲರ ಮೇಲಿರಲಿ. ಜತೆಗೆ ಹನುಮ ಜಯಂತಿಯನ್ನು ಯಾವ ರೀತಿ ಆಚರಿಸುತ್ತೇವೋ ಅದೇ ರೀತಿ ದತ್ತಾತ್ರೇಯ ಪಾದುಕೆ ದರ್ಶನ ದಿನವನ್ನು ವಿಜೃಂಭಣೆಯಿಂದ ಆಚರಿಸಬೇಕು. ಶೋಭಾಯಾತ್ರೆ ಸಂದರ್ಭ ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶವಾಗದಂತೆ ಸಾಗಬೇಕು. ಯುವಕರು ನಮ್ಮ ಹಿಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು, ಸಕಲೇಶಪುರ, ಬೇಲೂರು ತಾಲೂಕಿನ ಬೀಕ್ಕೊಡು, ಅರೇಹಳ್ಳಿ, ಚಿಕನಹಳ್ಳಿ, ಗೆಂಡೆಹಳ್ಳಿ, ಕೋಗಿಲಮನೆ ಇತರ ಗ್ರಾಮಗಳಿಂದ ಮಾತೆಯರು, ಪುರುಷರು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಬಜರಂಗದಳದ ಜಿಲ್ಲಾ ಸಂಚಾಲಕ ಕಿಶೋರ್ ಶೆಟ್ಟಿ ಮಾತನಾಡಿ, ಹಿಂದು ಧರ್ಮ, ದತ್ತ ಪೀಠ ಮತ್ತು ಸನಾತನ ಧರ್ಮದ ಉಳಿವಿಗಾಗಿ ಯುವಕರು ಶ್ರಮಿಸಬೇಕು. ದತ್ತಾತ್ರೇಯರ ಆಶೀರ್ವಾದ ಪಡೆದವರೇ ಧನ್ಯರು, ನಮ್ಮ ಧರ್ಮ ಉಳಿಸಿ ಬೆಳೆಸಲು ಹಿಂದುಗಳು ಹೋರಾಡಬೇಕು ಎಂದರು.
ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಾಕಿ ಲಾವಣ್ಯ ಪಡಿಯಾರು ಮಾತನಾಡಿ, ಈ ಹಿಂದೆ ಪುರುಷರು ಮಾತ್ರ ಮಾಲಾಧಾರಿಗಾಗಿ ದತ್ತಾತ್ರೇಯರ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಮಹಿಳೆಯರು ಧರ್ಮದ ಉಳಿವಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.
ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಗಣೇಶ್, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುಮನ್, ತಾಲೂಕು ಬಜರಂಗ ದಳದ ಸಂಚಾಲಕ ನಾಗೇಶ್, ಮುಖಂಡರಾದ ಮುರಳಿ, ಕುಮಾರ್, ಅರವಿಂದ್, ಲೀಲಾವತಿ ಸೇರಿದಂತೆ ಇತರರಿದ್ದರು.