

ಹಾಸನ: ಆಘಾತಕಾರಿ ಘಟನೆಯೊಂದರಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.
ಯಸಳೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಶರತ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯಸಳುರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಶರತ್ ಜೂನ್ 15ರಂದು ತಮ್ಮ ಸ್ನೇಹಿತರೊಬ್ಬರ ಮಗಲ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಲು ಸಾಂದರ್ಭಿಕ ರಜೆ ತೆಗೆದುಕೊಂಡಿದ್ದರು. ಹೊಳೆನರಸೀಪುರದ ನಗರದಲ್ಲಿರುವ ಮಳಲಿ ದೇವಸ್ಥಾನದ ಬಳಿ ಇರುವ ಕನ್ವೆನ್ಷನ್ ಹಾಲ್ನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.
ಕನ್ವೆನ್ಷನ್ ಹಾಲ್ ಮುಂಭಾಗ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸುತ್ತಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಶರತ್ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಿಥುನ್, ಲೋಹಿತ್, ನಟರಾಜು ಹಾಗೂ ಸ್ನೇಹಿತರ ಗುಂಪು ಶರತ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ಶರತ್ ಸ್ಥಳದಲ್ಲೇ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶರತ್ ಕುಸಿದು ಬಿದ್ದ ನಂತರ ದುಷ್ಕರ್ಮಿಗಳು ಅವರ ಮೇಲೆ ಕಲ್ಲುಗಳನ್ನು ಎಸೆಯುತ್ತ, ಮಚ್ಚಿನಿಂದ ಬೀಸುತ್ತ, ಪ್ಲ್ಯಾಸ್ಟಿಕ್ ಕುರ್ಚಿಯಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಾರೆ. ಆ ಬಳಿಕ ಅವರ ದೇಹದ ಮೇಲೆ ನಿಂತು ಕುಣಿಯಲಾರಂಭಿಸುತ್ತಾರೆ. ಮಿಥುನ್, ಲೋಹಿತ್, ನಟರಾಜು ಹಾಗೂ ಸ್ನೇಹಿತರ ಗುಂಪು ಪೇದೆ ಶರತ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಪ್ರಕರಣ ಸಂಬಂಧ ಹೊಳೆನರಸೀಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.