CCB ಪೊಲೀಸರ ಭರ್ಜರಿ ಬೇಟೆ; ಪೋಸ್ಟ್​ ಮೂಲಕ ತರಿಸಿಕೊಂಡಿದ್ದ 21.17 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್​​

Drugs Seize
Published on

ಬೆಂಗಳೂರು: ಬೇರೆ ಬೇರೆ ದೇಶಗಳಿಂದ ಪೋಸ್ಟ್​ ಮುಖಾಂತರ ತರಿಸಿಕೊಳ್ಳಲಾಗಿದ್ದ ವಿವಿಧ ಮಾದಕವಸ್ತುಗಳನ್ನು (Drugs) ಸಿಸಿಬಿ (CCB) ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಕಸ್ಟಮ್ಸ್‌ ಅಧಿಕಾರಿಗಳು (Custom Officers) ಜಂಟಿ ಕಾರ್ಯಾಚರಣೆ (Joint Operation) ನಡೆಸಿ, ಜಪ್ತಿ ಮಾಡಿದ್ದಾರೆ. ಬರೋಬ್ಬರಿ 21.17 ಕೋಟಿ ರೂ. ಮೌಲ್ಯದ ಡ್ರಗ್ಸ್​(Drugs) ಅನ್ನು ಅಧಿಕಾರಿಗಳು ಜಪ್ತಿ ಮಾಡಿದೆ.

ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ನಗರ ಪೊಲೀಸ್​ ಆಯುಕ್ತ, ಪೋಸ್ಟ್​ (Post) ಮೂಲಕ ತರಿಸಿಕೊಂಡಿದ್ದ 28 ಕೆ.ಜಿ ಹೈಡ್ರೊ ಗಾಂಜಾ, 2,569 ಎಲ್‌ಎಸ್‌ಡಿ ಸ್ಟ್ರಿಪ್ಸ್‌, 1 ಕೆ.ಜಿ 618 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, 11,908 ಎಕ್ಸ್‌ಟೆಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್‌, 102 ಗ್ರಾಂ ಕೋಕೆನ್‌, 336 ಗ್ರಾಂ ಚರಸ್‌, 1 ಕೆ.ಜಿ 217 ಗ್ರಾಂ ಗಾಂಜಾ ಎಣ್ಣೆ, 445 ಗ್ರಾಂ ಮ್ಯಾಥಾಕ್ಲಿನಾ, 11 ಇ–ಸಿಗರೇಟ್‌, 102 ಎಂಎಲ್‌ ನಿಕೋಟಿನ್‌ ಜಪ್ತಿ ಮಾಡಲಾಗಿದೆ.

ಪೋಸ್ಟ್​ ಮೂಲಕ ನಿಷೇಧಿತ ಮಾದಕ ವಸ್ತುಗಳನ್ನು (Drugs) ತರಿಸಿಕೊಳ್ಳುತ್ತಿದ್ದ ಖಚಿತ ಮಾಹಿತಿ ಬಂದಿತ್ತು. ಸಿಸಿಬಿ ಪೊಲೀಸರು (CCB Police) ನಿಗಾ ಇರಿಸಿದ್ದರು. ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎರಡು ಹಾಗೂ ಸಿಸಿಬಿ (CCB) ಠಾಣೆಯಲ್ಲಿ ಒಂದು ಪ್ರಕರಣವನ್ನು ಸೆಪ್ಟೆಂಬರ್‌ನಲ್ಲಿ ದಾಖಲಿಸಲಾಗಿತ್ತು. ಆಗ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿದೇಶದಿಂದ ಡ್ರಗ್ಸ್ (Drugs) ತರಿಸಿಕೊಂಡಿದ್ದ ಮಾಹಿತಿ ಲಭ್ಯವಾಗಿತ್ತು. ಬಳಿಕ ಅಂಚೆ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಯಿತು.

ಚಾಮರಾಜಪೇಟೆಯಲ್ಲಿರುವ ಅಂಚೆ ಕಚೇರಿ ಮೇಲೆ ಜಂಟಿ ದಾಳಿ ನಡೆಸಿದಾಗ ಅಮೆರಿಕ, ಬೆಲ್ಜಿಯಂ, ನೆದರ್ಲೆಂಡ್ಸ್‌ ಸೇರಿದಂತೆ ಇತರೆ ದೇಶಗಳಿಂದ ಬೆಂಗಳೂರಿಗೆ ತರಿಸಿಕೊಂಡಿದ್ದ ಸುಮಾರು 3,500 ಪೆಟ್ಟಿಗೆಗಳು ಪತ್ತೆಯಾದವು. ಶ್ವಾನದಳದಿಂದ ಪರಿಶೀಲನೆ ನಡೆಸಲಾಯಿತು. 606 ಪುಟ್ಟ ಪೆಟ್ಟಿಗೆಗಳಲ್ಲಿ ವಿವಿಧ ಮಾದರಿಯ ಮಾದಕವಸ್ತು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ವಿದೇಶದಿಂದ ಡ್ರಗ್ಸ್‌ ತರಿಸಿಕೊಂಡು, ಹೆಚ್ಚಿನ ಬೆಲೆಗೆ ನಗರದ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net