ಸೋತ್ರೂ, ಗೆದ್ರೂ ಕ್ಷೇತ್ರ ಬಿಡಲ್ಲ ; ಎಚ್‌ಡಿಕೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಟಾಂಗ್

cpt
Published on

ಚನ್ನಪಟ್ಟಣ : ನಾವು ಸೋತರು, ಗೆದ್ದರೂ ಇದೇ ಕ್ಷೇತ್ರದಲ್ಲಿ ಇರುತ್ತೇವೆ. ಆದರೆ, ಬೇರೆಯವರು ಇಲ್ಲಿ ಸೋತರೆ ಇನ್ನೊಂದು ಕ್ಷೇತ್ರ ಹುಡುಕುತ್ತಾರೆ. ಚನ್ನಪಟ್ಟಣ ಸೋತರೆ ಮಂಡ್ಯ ಅಂತ ಓಡಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಟಾಂಗ್ ನೀಡಿದರು.

ತಾಲೂಕಿನ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಈ ಮೊದಲು ಬೇರೆ ತರ ಇದ್ದರು. ಆದರೆ, ಈಗ ನಮ್ಮ ತೆ ಸೇರಿ ಸರಿ ಹೋಗಿದ್ದಾರೆ. ಈ ಬಾರಿ ಕೇವಲ ಕೈ ಮುಗಿದುಕೊಂಡು ಚುನಾವಣೆ ಮಾಡಿದರು. ಅದರ ಹಿಂದಿನ ಶ್ರಮ ಯಾರದು ಅಂತ ಅವರಿಗೂ ಗೊತ್ತು. ಹಾಗಾಗಿ, ಅವರು ನಮ್ಮ ಪಕ್ಷದ ತೆಯಲ್ಲಿ ಕೆಲಸ ಮಾಡುತ್ತಾರೆ ಅನ್ನೋ ವಿಶ್ವಾಸವಿದೆ ಎಂದರು.

ಉಪಚುನಾವಣೆಯಲ್ಲಿ ಜೆಡಿಎಸ್‌ನವರು ಬೇರೆಬೇರೆ ಕ್ಷೇತ್ರಗಳಿಂದ ಜನರನ್ನು ಕರೆಸಿ ಚುನಾವಣೆ ಮಾಡಿದರೂ ಕ್ಷೇತ್ರದ ಜನ ಅಂತಿಮವಾಗಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹಾಗಾಗಿ ಮತದಾರರಿಗಾಗಿ ಜ.19ರಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

 ಜನಸೇವೆಗೆ ಅಧಿಕಾರ ಬೇಕೆಂದೇನಿಲ್ಲ : ನಮ್ಮದೇ ಸರ್ಕಾರ ಇರುವ ಹಿನ್ನೆಲೆಯಲ್ಲಿ ಅಧಿಕಾರ ಇಲ್ಲದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಈಗ ಎಂಪಿ ಆಗಿದ್ದಾರಲ್ಲ ಅವರ ಹತ್ತಿರನೇ ಆಪರೇಷನ್ ಮಾಡಿಸಿ. 8 ಲಕ್ಷ ರೂ. ಬೇಡ ಒಂದು 50 ಸಾವಿರ ರೂ. ಅಥವಾ ಒಂದು ಲಕ್ಷ ರೂ. ಆಪರೇಷನ್ ಮಾಡಿಸಿ ಸಾಕು ಎಂದು ಸಂಸದ ಡಾ.ಮಂಜುನಾಥ್ ಹೆಸರು ಹೇಳದೇ ಡಿಕೆಸು ಕಿಚಾಯಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಮಾಜಿ ಶಾಸಕ ಎಂ.ಸಿ.ಅಶ್ವತ್ಥ, ಕೆಪಿಸಿಸಿ ಸದಸ್ಯರಾದ ಟಿ.ಕೆ.ಯೋಗೇಶ್, ಪಿ.ರಮೇಶ್, ಪಕ್ಷದ ಬ್ಲಾಕ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಸುನೀಲ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಂಗನಾಥ್, ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಮುಖಂಡರಾದ ದುಂತೂರು ವಿಶ್ವನಾಥ್, ಕೂಡ್ಲೂರು ದಿನೇಶ್, ಎಸ್.ಲಿಂಗೇಶ್ ಕುಮಾರ್, ರಾಂಪುರ ಮಲವೇಗೌಡ, ಡಿ.ಕೆ.ಕಾಂತರಾಜು, ಎಂ.ಎ.ಕರುಣ್, ಚಂದ್ರಸಾಗರ್, ಕೆ.ಟಿ.ಲಕ್ಷ್ಮಮ್ಮ ಉಪಸ್ಥಿತರಿದ್ದರು.

ಕುಮಾರಸ್ವಾಮಿ ಡವ್ ಗಿರಾಕಿ! : ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಉಪಚುನಾವಣೆ ಧರ್ಮ ಹಾಗೂ ಅಧರ್ಮದ ನಡುವೆ ನಡೆದಿದ್ದು, ಕುಮಾರಸ್ವಾಮಿ ಏನೂ ಕೆಲಸ ಮಾಡದಿದ್ದಕ್ಕೆ ಜನ ನನ್ನನ್ನು ಗೆಲ್ಲಿಸಿದರು. ಕುಮಾರಸ್ವಾಮಿ ಡವ್ ಗಿರಾಕಿ ಅಂತ ಜನರಿಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರು ಬಹಳ ವೇದಾಂತ ಹೇಳುತ್ತಾರೆ. ಹಾಗೂ ನಾಟಕ ಮಾಡುತ್ತಾರೆ. ಕಳೆದ 7 ವರ್ಷಗಳಿಂದ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಲಜೀವನ್ ಮಿಷನ್ ಯೋಜನೆ ಸಂಪೂರ್ಣ ಫೇಲ್ ಮಾಡಿದ್ದಾರೆ. ಜನರಿಗೆ ಸರಿಯಾಗಿ ಕುಡಿಯುವ ನೀರು ಕೊಟ್ಟಿಲ್ಲ. ನಾನು ಹಳ್ಳಿ ಹಳ್ಳಿಗೆ ಹೋದಾಗ ಜನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಒಂದು ದಿನವೂ ಬಂದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಭೆ ಮಾಡಿಲ್ಲ. ಕೆಲವು ಪುಡಾರಿಗಳು ಹಾಗೂ ಕಂಟ್ರಾಕ್ಟರ್‌ಗಳನ್ನು ಇಟ್ಟುಕೊಂಡು ತಿರುಗಾಡಿದ್ದರಷ್ಟೇ. ಕಳೆದ 6 ವರ್ಷದಿಂದ ಅಧಿಕಾರಿಗಳು ಹಳ್ಳಿಕಡೆ ಹೋಗಿರಲಿಲ್ಲ. ಈಗ ನಾವು ಅಧಿಕಾರಿಗಳನ್ನು ಹಳ್ಳಿಗೆ ಕರೆದುಕೊಂಡು ಹೋಗುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಕೆಲಸ ಮಾಡುತ್ತೇನೆ ಎಂದರು.

ಜಿಲ್ಲೆಯಲ್ಲಿ ಹಿಡಿತ ಕಳೆದುಕೊಂಡ ಎಚ್‌ಡಿಕೆ

ತಾಲೂಕನ್ನು ಕುಮಾರಸ್ವಾಮಿ ಅವರು 10 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈಗ ಎಚ್ಡಿಕೆ ಇಡೀ ಜಿಲ್ಲೆಯಲ್ಲಿ ಹಿಡಿತ ಕಳೆದುಕೊಂಡಿದ್ದಾರೆ ಎಂದು ಸಿಪಿವೈ ಕುಟುಕಿದರು. ಜ.19ರಂದು ತಾಲೂಕಿನ ಮತದಾರರಿಗೆ ಕೃತಜ್ಞತೆ ತಿಳಿಸಲಿದ್ದೇವೆ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಸಚಿವರೂ ಆಗಮಿಸಲಿದ್ದಾರೆ. ಸಮಾವೇಶದ ಮೂಲಕ ಧನ್ಯವಾದ ತಿಳಿಸುವುದಲ್ಲದೇ ಕ್ಷೇತ್ರದ ಬೇಡಿಕೆಗಳನ್ನು ಅವರ ಮುಂದೆ ಇಡುತ್ತೇವೆ. ಹಾಲಿನ ದರ ಹೆಚ್ಚಳ ಸೇರಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಈ ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net