

ಬೆಂಗಳೂರು: ಕಾವೇರಿ ನೀರಿನ ದರ ಪರಿಷ್ಕರಣೆಗೆ ಸಂಬಂಧಿಸಿ ಬೆಂಗಳೂರು ಜಲಮಂಡಳಿ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಮತ್ತೆ ಮುನ್ನಲೆಗೆ ಬಂದಿದ್ದು, ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಹತ್ತು ವರ್ಷಗಳ ನಂತರ ನೀರಿನ ದರ ಪರಿಷ್ಕರಣೆಯಾದರೆ, ಗೃಹ ಬಳಕೆ ನೀರಿನ ದರವನ್ನು ಶೇ.30ರಿಂದ 40 ಹಾಗೂ ವಾಣಿಜ್ಯ ಬಳಕೆ ದರ ಶೇ.45 ಹೆಚ್ಚಳವಾಗುವ ಸಾಧ್ಯತೆಯಿದೆ. ಕಾವೇರಿ ನೀರಿನ ದರವನ್ನು ಕಡೆಯದಾಗಿ 2014ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಬಳಿಕ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ದರ ಏರಿಕೆಗೆ ಅನುಮತಿ ನೀಡಿರಲಿಲ್ಲ. ಈ ಅವಧಿಯಲ್ಲಿ ವಿದ್ಯುತ್ ಬೆಲೆ ಕಾಲ ಕಾಲಕ್ಕೆ ಪರಿಷ್ಕರಣೆಯಾಗಿ ಜಲಮಂಡಳಿಯ ಮೇಲಿನ ಆರ್ಥಿಕ ಹೊರೆ ಹೆಚ್ಚಲು ಕಾರಣವಾಗಿದೆ. ಹೀಗಾಗಿ ನೀರಿನ ದರ ಪರಿಷ್ಕರಣೆ ಅನಿವಾರ್ಯ ಎನ್ನಲಾಗಿದೆ.
ಕಳೆದ ವರ್ಷ ಸಲ್ಲಿಸಿದ್ದ ಪ್ರಸ್ತಾವನೆ ಚರ್ಚೆಯ ಹಂತದಲ್ಲಿದೆ. ಕಾವೇರಿ ನೀರಿನ ದರ ಪರಿಷ್ಕರಿಸುವುದು ಸರ್ಕಾರದ ನಿರ್ಧಾರವಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ.ರಾಮ್ ಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಜಲಮಂಡಳಿ 10 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕವನ್ನು ಹೊಂದಿದೆ. ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನೀರು ಪೂರೈಕೆಯಾದ ನಂತರದಲ್ಲಿ ನೀರಿನ ಸಂಪರ್ಕ ಹೊಂದಿದವರ ಸಂಖ್ಯೆ 13 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ ಪ್ರತಿ ತಿಂಗಳು ಗ್ರಾಹಕರಿಂದ 131 ಕೋಟಿ ರೂ. ನೀರಿನ ಶುಲ್ಕ ಸಂಗ್ರಹವಾಗುತ್ತಿದೆ. ಇದರಲ್ಲಿ 68 ಕೋಟಿ ರೂ. ವಿದ್ಯುತ್ ಬಿಲ್ಗೆ, 40 ಕೋಟಿ ರೂ. ವೇತನ ಪಾವತಿಗೆ, 10 ಕೋಟಿ ರೂ. ಸಾಲ ಮರುಪಾವತಿ ಸೇರಿ ಎಸ್ಟಿಪಿ ನಿರ್ವಹಣೆ, ಇತರ ನಿರ್ವಹಣಾ ವೆಚ್ಚಕ್ಕೆ ರ್ಖಚಾಗುತ್ತಿದೆ. ಒಟ್ಟಾರೆಯಾಗಿ ಆದಾಯಕ್ಕಿಂತ ಸುಮಾರು 15 ಕೋಟಿ ರೂ. ವೆಚ್ಚ ಹೆಚ್ಚಾಗಿದೆ ಎನ್ನಲಾಗಿದೆ.