

ಮಂಡ್ಯ: ಕಾವೇರಿ ನದಿಯಲ್ಲಿ ಕೃಷ್ಣನ ಭಕ್ತರಿಬ್ಬರು ಕೊಚ್ಚಿ ಹೋದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಇಸ್ಕಾನ್ ಫಾರಂ ಹೌಸ್ ಬಳಿ ಕಾವೇರಿ ನೀರಿನಲ್ಲಿ ಸ್ನಾನ ಮಾಡಲೆಂದು ಹೋಗಿದ್ದ ಇಬ್ಬರು ಕಣ್ಮರೆಯಾಗಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್‌ನ ಆರ್.ಎಸ್.ದಾಸ್ (43), ಚಿತ್ರದುರ್ಗದ ಗುಣಾರನವದಾಸ್ (35) ನಾಪತ್ತೆಯಾದವರು.
ಆರ್.ಎಸ್.ದಾಸ್ ಮತ್ತು ಗುಣಾರನವದಾಸ್ ಇಬ್ಬರೂ ಮೈಸೂರಿನ ಇಸ್ಕಾನ್ ದೇವಸ್ಥಾನದಲ್ಲಿ ದೀಕ್ಷೆ ಪಡೆದಿದ್ದರು. ಹಲವು ವರ್ಷಗಳಿಂದ ಇಸ್ಕಾನ್ ಸಂಸ್ಥೆಯ ಮೂಲಕ ಧಾರ್ಮಿಕ ಕಾರ್ಯ ಮಾಡುತ್ತಿದ್ದರು.
ಸಹೋದ್ಯೋಗಿಗಳೊಂದಿಗೆ ಇಸ್ಕಾನ್ ಫಾರಂಗೆ ಶುಕ್ರವಾರ ಮಧ್ಯಾಹ್ನ ಬಂದಿದ್ದ ಇವರಿಬ್ಬರೂ ಆಹಾರ ಸೇವನೆ ಮುನ್ನ ಸ್ನಾನ ಮಾಡಲೆಂದು ಕಾವೇರಿ ನದಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದು, ಶನಿವಾರ ಮಧ್ಯಾಹ್ನ 12 ಗಂಟೆಯಾದರೂ ಪತ್ತೆಯಾಗಿರಲಿಲ್ಲ.