

ಹನೂರು: ತಾಲೂಕಿನ ಭೈರನತ್ತ ಗ್ರಾಮದಲ್ಲಿ ಶುಕ್ರವಾರ ಜಾನುವಾರು ಸಾಕಣೆ ಶೆಡ್ ಬೆಂಕಿಗೆ ಆಹುತಿಯಾಗಿದ್ದು, 2 ಮೇಕೆ ಹಾಗೂ ಒಂದು ಕರು ಬಲಿಯಾಗಿದೆ.
ಗ್ರಾಮದ ಸಿದ್ದಪ್ಪ ಎಂಬುವರು ತೋಟದ ಮನೆಯಲ್ಲಿ ವಾಸವಾಗಿದ್ದು, ಹಿಂಭಾಗದಲ್ಲಿ ಜಾನುವಾರು ಶೆಡ್ ನಿರ್ಮಿಸಿಕೊಂಡಿದ್ದರು. ಆದರೆ ಬೆಳಗಿನ ಜಾವ ಶೆಡ್‌ಗೆ ಬೆಂಕಿ ತಗುಲಿ ಸುಟ್ಟಿದೆ. ಪರಿಣಾಮ 2 ಮೇಕೆ ಹಾಗೂ ಒಂದು ಕರು ಬಲಿಯಾಗಿದೆ. ಈ ವೇಳೆ ಬೆಂಕಿ ನಂದಿಸಲು ತೆರಳಿದ್ದ ಸಿದಪ್ಪ ಹಾಗೂ ಪತ್ನಿ ಮಂಜುಳಾ ಅವರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಾಮಗೆರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎನ್.ಕೆ ಚೈತ್ರಾ ಹಾಗೂ ಆರ್‌ಐ ಶೇಷಣ್ಣ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದರು. ಈ ಸಂಬಂಧ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿ ಕೊಡುವುದಾಗಿ ತಹಸೀಲ್ದಾರ್ ಚೈತ್ರಾ ಅವರು ಭರವಸೆ ನೀಡಿದರು.