ರೈತರ ಕೈ ಹಿಡಿದ ಹರಳು!

Rmgm-Ph-01-Haralu Krushi Story Rmgm - Photo-29-1-2025
Published on

* ಔಷಧ ಗುಣದಿಂದ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ

* ಯಂತ್ರಗಳ ನಿರ್ವಹಣೆಯಲ್ಲೂ ಬಳಕೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜಿಲ್ಲೆಯಲ್ಲಿ ಸಾಲು ಬೆಳೆಯಾಗಿ ಬೆಳೆಯುವ ಹರಳು ಬೆಳೆ ರೈತರ ಕೈ ಹಿಡಿದಿದೆ.

ಜಿಲ್ಲೆಯಲ್ಲಿ ಮಳೆಯಾಶ್ರಿತವಾಗಿ ರಾಗಿಯನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. ರಾಗಿ ಮಧ್ಯೆ ಸಾಲು ಬೆಳೆಗಳಾಗಿ ತೊಗರಿ, ಹರಳು, ಅವರೆ, ಜೋಳ, ಹಲಸಂದೆ ಬೆಳೆಯುವ ಪರಿಪಾಠವೂ ಇದೆ. ಇಂತಹ ಸಾಲು ಬೆಳೆಗಳಲ್ಲಿ ಹರಳು ರೈತರ ಪಾಲಿಗೆ ವರವಾಗಿದೆ.

ಹರಳು ಎಣ್ಣೆಕಾಳು ಬೆಳೆಯಾಗಿದ್ದು, ಔಷಧ‘ ಗುಣ ಹೊಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ. ಕಳೆದ ಹಲವು ವರ್ಷಗಳಿಂದ ಸಾಲು ಬೆಳೆಗಳಲ್ಲಿ ವಿರಳವಾಗಿ ಹರಳು ಬೆಳೆ ಕಾಣುತ್ತಿತ್ತು. ಆದರೆ, ಈ ಬಾರಿ ಪ್ರತೀ ರೈತರು ರಾಗಿಯಷ್ಟೇ ಪ್ರಾಮುಖ್ಯತೆ ಹರಳಿಗೂ ಕೊಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ಸುಮಾರು 6 ಸಾವಿರದಿಂದ 6,500 ರೂ. ಬೆಲೆ ಇದ್ದು ರೈತರಿಗೆ ವರದಾನವಾಗಿದೆ.

ಕಡಿಮೆ ಮಳೆ ಸಾಂದ್ರತೆಯಲ್ಲಿ ಹೆಚ್ಚಿನ ನಿರ್ವಹಣೆ, ರಾಗಿ ಬಿತ್ತನೆ ಒಂದೇ ಖರ್ಚಿನಲ್ಲಿ ಬೆಳೆಯುವ ಬೆಳೆ ಇದಾಗಿದೆ. ಈ ಬಾರಿ ಮುಂಗಾರು ಕೊರತೆ ಕಂಡರೂ ಹಿಂಗಾರು ಕೊರತೆಯಾಗದ ಕಾರಣ ರೈತರ ಜಮೀನಿನಲ್ಲಿ ಹರಳು ಗಿಡಗಳು ಬಹು ಸಂತುಷ್ಟವಾಗಿ ಬಂದು ಹರಳು ಗೊನೆಗಳು ಬಾಗಿವೆ. ಚಿತ್ರದುರ್ಗ, ರಾಯಚೂರು ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರಾಮನಗರದಲ್ಲಿ ಈ ಬೆಳೆ ಬೆಳೆಯಲು ಒಲವು ತೋರುತ್ತಿದ್ದಾರೆ.

ಬಹುಉಪಯೋಗಿ ಹರಳು

ಹರಳಣ್ಣೆ ಔಷಧೀಯ ಗುಣ ಹೊಂದಿದ್ದು, ಹೆಚ್ಚಿನ ರೀತಿಯಲ್ಲಿ ಸೌಂದರ್ಯ ವರ್ಧಕ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೆಚ್ಚಿನ ಜನರು ತಲೆಗೆ ಬಳಸುತ್ತಾರೆ. ಇದರ ಜತೆಗೆ ಔಷಧ ತಯಾರಿಕೆ ಮತ್ತು ವಿವಿಧ‘ ವಸ್ತು ತಯಾರಿಕೆಯಲ್ಲೂ ಹರಳು ಬಳಸಲಾಗುತ್ತದೆ. ಅಲ್ಲದೆ, ರೈಲು ಇಂಜಿನ್ ಯಂತ್ರಗಳ ನಿರ್ವಹಣೆ, ಯುದ್ಧ ವಿಮಾನ, ರಕ್ಷಣಾ ಕ್ಷೇತ್ರಗಳಲ್ಲಿ, ಗ್ರೀಸ್ ಬಳಕೆಯಲ್ಲಿ ಹರಳನ್ನು ಪ್ರಮುಖವಾಗಿ ಬಳಸಲಾಗುತ್ತದೆ ಎನ್ನಲಾಗಿದೆ.

ಹರಳೆಣ್ಣೆ 700ಕ್ಕೂ ಅಧಿಕ ಉಪಯೋಗಗಳಲ್ಲಿ ಬಳಕೆಯಾಗುತ್ತದೆ. ಅಲ್ಲದೆ ಹರಳಿನ ಹಿಂಡಿಯನ್ನು ಸಾವಯವ ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದೆ.

ಒಣ ಬೇಸಾಯ

ಹೆಚ್ಚಿನ ನೀರನ್ನು ಬಯಸದ ಬೆಳೆ ಇದಾಗಿದ್ದು, 3 ರಿಂದ 5 ತಿಂಗಳ ಬೆಳೆಯಾಗಿದೆ. ನೀರಾವರಿ ಪ್ರದೇಶದಲ್ಲಿ 10 ತಿಂಗಳವರೆಗೂ ಬೆಳೆ ಬೆಳೆಯಬಹುದು. ಎರಡು ಮೂರು ಕೊಯ್ಲು ಒಣ ಬೇಸಾಯದಲ್ಲೇ ಹರಳು ಕಟಾವು ಮಾಡಬಹುದು. ಒಂದೇ ಗಿಡದಲ್ಲಿ ಹೆಚ್ಚಿನ ಸಲು ಕಾಣುವುದು ಹರಳು ಕೃಷಿಯ ವಿಶೇಷ. ರಾಗಿ ಕೊಯ್ಲು ನಂತರ ಗಿಡಗಳ ಬೆಳವಣಿಗೆ ಹೆಚ್ಚು ಕಾಣಲಿದ್ದು, ಹರಳು ಕೃಷಿಗೆ ಸಾಲಿನಲ್ಲಿ ಉತ್ತಮ ವಾತಾವರಣ ಸಿಕ್ಕಿ ಹೆಚ್ಚಿನ ಸಲು ಸಿಗುತ್ತದೆ ಎನ್ನುತ್ತಾರೆ ಅಂಜನಾಪುರ ರೈತ ಶಿವಕುಮಾರಸ್ವಾಮಿ.

ಅವರೆ ತೊಗರಿ ಕಡಿಮೆ

ಹೆಚ್ಚಿನ ರೈತರು ಅವರೆ, ತೊಗರಿ ಕೃಷಿಯತ್ತ ಮನಸ್ಸು ಮಾಡಿಲ್ಲ. ಹರಳು ಕೃಷಿಯನ್ನೇ ಹೆಚ್ಚು ಅವಲಂಬಿಸಿರುವುದರಿಂದ ಸಾಲು ಬೆಳೆಗಳಲ್ಲಿ ತೊಗರಿ ಮತ್ತು ಅವರೆ ವಿರಳವಾಗಿ ಕಾಣುತ್ತಿದೆ. ಜತೆಗೆ ಹಲಸಂದೆ ಮತ್ತು ಜೋಳ ಬೆಳೆ ಸಂಪೂರ್ಣ ಕಡಿಮೆಯಾಗಿದೆ. ಹರಳು ಸಲಿಗೆ ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕಾರಣ ಹೆಚ್ಚಿನ ರೈತರು ಹರಳು ಕೃಷಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹಳೇ ಪದ್ಧತಿ

ಹರಳು ಕೃಷಿಯಲ್ಲಿ ಉತ್ತಮ ಸಲು ನೀಡುವ ತಳಿಗಳಿವೆ. ಸಾಲು ಬೆಳೆಯಾಗಿ ಹಳೇ ನಾಟಿ ತಳಿ ಬೆಳೆಯುವ ಬದಲು ಹೆಚ್ಚಿನ ಸಲು ನೀಡುವ ಉತ್ತಮ ತಳಿ ಬೀಜ ತಂದು ಬಿತ್ತನೆ ಮಾಡಿ ಪ್ರತ್ಯೇಕವಾಗಿಯೇ ರಾಗಿ ಬೆಳೆಯಂತೆ ಹರಳು ಬೆಳೆದರೆ ಇನ್ನೂ ಹೆಚ್ಚಿನ ಸಲು ಕೈಸೇರುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿ ಪ್ರದೀಪ್.

ಜಂಟಿ ಕೃಷಿ ನಿರ್ದೇಶಕಿ, ರಾಮನಗರ

ಎನ್. ಅಂಬಿಕಾ

ಜಿಲ್ಲೆಯಲ್ಲಿ ಹರಳು ಮಳೆಯಾಶ್ರಿತ, ಸಾಲು ಬೆಳೆಗಳಾಗಿ ಬೆಳೆಯುತ್ತಿದ್ದಾರೆ. ಪ್ರಸ್ತುತ ಸುಮಾರು 350 ಹೆಕ್ಟೇರ್ ಪ್ರದೇಶದಲ್ಲಿ ಹರಳು ಬೆಳೆ ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 463 ಟನ್ ಇಳುವರಿ ಗುರಿ ಹೊಂದಲಾಗಿದೆ. ಹರಳಿನಲ್ಲಿ ಶೇ.30 ರಿಂದ 50 ಎಣ್ಣೆ ಅಂಶ ಇರುವುದರಿಂದ ರೈತರಿಗೆ ಪೂರಕ ಆದಾಯ ತರುವ ಬೆಳೆಯಾಗಿದೆ.

==

ರೈತ, ದೇವರದೊಡ್ಡಿ

ರಾಜು

ರೈತ ಬೆಳೆಯುವ ಬೆಳೆಗಳಿಗೆ ಪ್ರಮುಖವಾಗಿ ಕೀಟ ಬಾಧೆಗಳು ತೊಂದರೆ ನೀಡುತ್ತವೆ. ಹರಳು ಕೃಷಿಗೂ ಕೀಟಬಾಧೆ ಇದೆ. ಆದರೆ ಈ ಬಾರಿ ಹರಳು ಕೃಷಿಗೆ ಕೀಟಬಾದೆ ಕಂಡಿಲ್ಲ. ಇದರಿಂದ ಹರಳು ಗೊನೆಗಳಲ್ಲಿ ಉತ್ತಮ ಫಸಲು ಬಂದಿದೆ. ರೈತರಿಗೆ ಒಂದಷ್ಟು ಔಷಧಿ ಖರ್ಚು ಉಳಿಸಿ ಲಾಭದತ್ತ ಮುಖ ಮಾಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net