

ಬೆಂಗಳೂರು: ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾತಿ ಜನಗಣತಿ ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈವರೆಗೆ ಮುಟ್ಟಲಿಲ್ಲ. ಇದೀಗ ಮೋದಿ ಸರ್ಕಾರ ದೇಶಾದ್ಯಂತ ಜನಗಣತಿ ನಡೆಸಲಾಗುವುದು ಎಂದು ಹೇಳುತ್ತಿರುವುದು ಬರೀ ನಾಟಕ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪೌರಕಾರ್ಮಿಕರ ದಿನ ನಿಮಿತ್ತ ಬಿಬಿಎಂಪಿ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ "ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ' ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದೆ. ಆಗ ನಮ್ಮ ಸರ್ಕಾರವು ಜನಗಣತಿ ಸಮೀಕ್ಷೆ ನಡೆಸಿತ್ತು. 2016ರಲ್ಲೇ ಸರ್ವೇ ಕಾರ್ಯ ಮುಗಿದಿತ್ತು. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಈ ವರದಿಯನ್ನು ಕಾರ್ಯರೂಪಕ್ಕೆ ತರಲಿಲ್ಲ. ಇದೀಗ ನಾನು ಮತ್ತು ರಾಹುಲ್ಗಾಂಧಿ ದೇಶಾದ್ಯಂತ ಹೋರಾಟ ನಡೆಸಿದ್ದ ಪರಿಣಾಮ ಮೋದಿ ಸರ್ಕಾರವು, ಜನಗಣತಿ ಸಮೀಕ್ಷೆ ನಡೆಸುವುದಾಗಿ ಹೇಳಿದೆ. 2023ರ ಏ.16ರಂದು ಸಮೀಕ್ಷೆ ನಡೆಸುವಂತೆ ಮೋದಿ ಅವರಿಗೆ ಪತ್ರ ಬರೆದಿದ್ದೆ. 2 ವರ್ಷವಾದರೂ ಈ ಬಗ್ಗೆ ಮಾತನಾಡದ ಕೇಂದ್ರ ಸರ್ಕಾರ, ಇದೀಗ ಕ್ರೆಡಿಟ್ ತೆಗೆದುಕೊಳ್ಳಲು ಸಮೀಕ್ಷೆ ನಡೆಸುವುದಾಗಿ ಘೋಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಗಣತಿಯ ಬಗ್ಗೆ ಕೇಂದ್ರಕ್ಕೆ ನಿಜವಾಗಿ ಕಾಳಜಿ ಇದ್ದರೆ ಬಜೆಟ್ನಲ್ಲಿ ಅನುದಾನ ಇಡಬೇಕಿತ್ತು. ಬರೀ 515 ಕೋಟಿ ರೂ. ಇಟ್ಟಿದ್ದಾರೆ. ಇದು ತೋರ್ಪಡಿಕೆ ಮಾತ್ರ ಗಣತಿ ಮಾಡುವುದಾಗಿ ಮೋದಿ ಸರ್ಕಾರ ಘೋಷಿಸಿದೆ. ಈ ಬಗ್ಗೆ ಜನರು ಎಚ್ಚರವಹಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ರಾಜಕೀಯ ಮತ್ತು ಉದ್ಯೋಗದಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಡಬೇಕೆಂದು ಸತತವಾಗಿ ಹೋರಾಟ ನಡೆಸುತ್ತಿದ್ದರೂ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ಮತ್ತು ಒಬಿಸಿ ಸಮುದಾಯದವರಿಗೆ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಅರ್ಟಿಕಲ್ 15(5) ಕಾನೂನು ಅನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾಸಾಗಿದ್ದರೂ ಈಗಿನ ಸರ್ಕಾರ ಕಾರ್ಯರೂಪಕ್ಕೆ ತಂದಿಲ್ಲ. ಜೊತೆಗೆ, ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂದು ಒತ್ತಡ ತಂದರೂ ಮೋದಿ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಮಲ್ಲಿಕಾರ್ಜುನ ರ್ಖಗೆ ವಾಕ್ ಪ್ರಹಾರ ನಡೆಸಿದರು.
ಕಾರ್ಮಿಕರ ವಿರೋಧಿ ಮೋದಿ ಸರ್ಕಾರ: ಸ್ವಾತಂತ್ರ್ಯ ಬರುವ ಮುನ್ನ ಡಾ.ಬಿ.ಆರ್.ಅಂಬೇಡರ್ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಕಾರ್ಮಿಕರ ಕಲ್ಯಾಣಕ್ಕಾಗಿ 44 ಕಾನೂನುಗಳನ್ನು ತಂದಿದ್ದರು. ಆದರೆ, ಈಗಿನ ಕೇಂದ್ರ ಸರ್ಕಾರ 44 ಕಾನೂನುಗಳನ್ನು ತೆಗೆದುಹಾಕಿದ್ದು, 4 ಕಾನೂನುಗಳನ್ನು ಮಾತ್ರ ಮಾಡುವ ಮೂಲಕ ಕಾರ್ಮಿಕರಿಗೆ ತೊಂದರೆ ನೀಡುತ್ತಿದೆ ಎಂದು ಮೋದಿ ಸರ್ಕಾರ ವಿರುದ್ಧ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದೊಡ್ಡ ಕಾಪೋರ್ರೇಟ್ ಕಂಪನಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಿನಕ್ಕೆ 10 ಗಂಟೆ ಹಾಗೂ ರಾತ್ರಿ ಪಾಳಯದಲ್ಲಿ ಹೆಣ್ಣು ಮಕ್ಕಳ ಕೆಲಸ ಮಾಡುವಂತೆ ಕಾನೂನು ರೂಪಿಸಿದೆ. ಮೋದಿ ಸರ್ಕಾರ ಬಡವರ ಪರವಾಗಿ ಯಾವುದೇ ಕಾನೂನುಗಳನ್ನು ರೂಪಿಸುವುದಿಲ್ಲ. ವರ್ಷದಿಂದ ವರ್ಷಕ್ಕೆ ನರೇಂದ್ರ ಮೋದಿ ಅವರು, ಸಾರ್ವಜನಿಕ ವಲಯದ ದೊಡ್ಡ ಕಂಪನಿಗಳನ್ನು ಮುಚ್ಚುತ್ತಿದ್ದು, ಹಿಂದುಳಿದ ನೌಕರರಿಗೆ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಪೋರ್ರೇಟ್ ಕಂಪನಿಗಳಿಗೆ ಅನುಕೂಲಕ್ಕಾಗಿ ಗುತ್ತಿಗೆ ಪದ್ಧತಿ ಜಾರಿಗೆ ತಂದಿದ್ದಾರೆ ಎಂದರು.
ಪುರಸಭೆ ಪೌರಕಾರ್ಮಿಕರನ್ನೂ ಖಾಯಂಗೊಳಿಸಿ:ದೇಶದ ಇತಿಹಾಸದಲ್ಲೇ ಏಕಕಾಲದಲ್ಲಿ ಕರ್ನಾಟಕ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸಿರುವುದು ಹೆಮ್ಮೆಯ ವಿಷಯ. ನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಅದೇರೀತಿ, ಪುರಸಭೆ ಸೇರಿ ವಿವಿಧ ಸ್ಥಳಿಯ ಸಂಸ್ಥೆಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡುವಂತೆ ಸರ್ಕಾರಕ್ಕೆ ಸೂಚಿಸುತ್ತೇನೆ.
| ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ.
ದೇಶದ ಪ್ರಗತಿ ಮತ್ತು ಕಾರ್ಮಿಕ ಕಲ್ಯಾಣಕ್ಕಾಗಿ ಒಳ್ಳೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದ ಬಾಬು ಜಗಜೀವನ್ರಾಮ್ (ಬಾಬೂಜಿ) ದೇಶದ ಪ್ರಧಾನಿಯಾಗಲಿಲ್ಲ. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ಇಎಸ್ಐ ಆಸ್ಪತ್ರೆ ಸೇರಿ ವೈದ್ಯಕಿಯ ಕಾಲೇಜು ಮತ್ತು ಕಾರ್ಮಿಕರ ಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿಲ್ಲ.
| ಕೆ.ಎಚ್.ಮುನಿಯಪ್ಪ, ಆಹಾರ ಸಚಿವ.