

ಬೆಂಗಳೂರು:ಕೋವಿಡ್-19 ನಿರ್ವಹಣೆಯಲ್ಲಿ ಹಣ ದುರುಪಯೋಗ ಕೇಸ್ ಸಂಬಂಧ ವಿಚಾರಣೆಗೆ ಬರುವಂತೆ ಬಿಬಿಎಂಪಿ ಆರೋಗ್ಯಧಿಕಾರಿ ಡಾ.ಎಸ್.ಕೆ.ಸವಿತಾ,ಆರೋಗ್ಯ ವೈದ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್ಗೆ ನಗರಾಭಿವೃದ್ಧಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ನೋಟಿಸ್ ತಲುಪಿದ 15 ದಿನದೊಳಗೆ ವಿಚಾರಣೆ ಹಾಜರಾಗಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ರಾಜರಾಜೇಶ್ವರಿನಗರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ಆರೋಗ್ಯಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಡಾ.ಎಸ್.ಕೆ.ಸವಿತಾ, ತಮ್ಮ ಪುತ್ರ ಸಿ.ಸಿದ್ದರಾಜು ಚಿರಾಗ್ ಒಡೆತನದ ಎಂ/ಎಸ್.ಎವಿಎಸ್ ಎಂಟರ್ಪ್ರೆಸಸ್ ಎಂಬ ನಕಲಿ ಸಂಸ್ಥೆಗೆ ಅಕ್ರಮವಾಗಿ ಕಾರ್ಯಾದೇಶ ಪತ್ರ ನೀಡಿದ್ದರು. ಕಾರ್ಯಾದೇಶ ಪಡೆದ ನಂತರ ಈ ಸಂಸ್ಥೆ, ಸಿಬ್ಬಂದಿಗೆ ವೇತನ ಪಾವತಿಸದೆ ಸಂಸ್ಥೆಯ ಹೆಸರಿನಲ್ಲಿ ನಿಯಮಬಾಹಿರವಾಗಿ 41 ಲಕ್ಷ ರೂ.ಗುಳಂ ಮಾಡಿತ್ತು.
ಅಲ್ಲದೆ, ಪೂರ್ವ ವಲಯದಲ್ಲಿ ಸೊಳ್ಳೆ ನಿಯಂತ್ರಣ ಕೆಲಸ ಮಾಡದಿದ್ದರೂ 2018-19 ಮತ್ತು 2019-20ರಲ್ಲಿ ಎಂ/ಎಸ್.ಎವಿಎಸ್ ಎಂಟರ್ಪ್ರೆಸಸ್ನ ನಕಲು ವರ್ಕ್ ಡನ್ ಪತ್ರ ಉಪಯೋಗಿಸಿಕೊಂಡು ಬೊಮ್ಮನಹಳ್ಳಿ, ಮಹದೇವಪುರ ಮತ್ತು ಪೂರ್ವ ವಲಯದಲ್ಲಿ ಟಂಡರ್ ಹಾಕಿ ಸರಬರಾಜು ಕಾರ್ಯಾದೇಶ ಪತ್ರ ಪಡೆಯಲಾಗಿತ್ತು. ಅಲ್ಲದೆ, ನಿಯಮದನ್ವಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿರುವ ಯಾವುದೇ ಕಂಪನಿ ಪರವಾಗಿ ವ್ಯವಹಾರ ಮಾಡಲು ಅವಕಾಶ ಇರುವುದಿಲ್ಲ. ಆದರೆ, ಈ ನಿಯಮ ಉಲ್ಲಂಘಿಸಿ ಸವಿತಾ, ತಮ್ಮ ಪುತ್ರ ಒಡೆತನದ ಕಂಪನಿಗೆ 20ಕ್ಕೂ ಅಧಿಕ ಕಾರ್ಯದೇಶ ಪತ್ರ ನೀಡಿ ಗಂಭೀರ ಕರ್ತವ್ಯಲೋಪ ಎಸೆಗಿದ್ದಾರೆ.
ಆರೋಗ್ಯ ಇಲಾಖೆಯಿಂದ ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಆರೋಗ್ಯ ವೈದ್ಯಾಧಿಕಾರಿ (ಶಾಂತಿನಗರ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಡಾ.ಜಿ.ಶ್ರೀನಿವಾಸ್, ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸ್ವಾಬ್ ಕೆಲಕ್ಟರ್, ಗಣಕಯಂತ್ರ ನಿರ್ವಾಹಕರಗಳ ಹೆಸರಿನಲ್ಲಿ ಬಿಬಿಎಂಪಿ ನೌಕರರ ಮತ್ತು ಅವರ ಕುಟುಂಬದ ಸದಸ್ಯರ ಖಾತೆಗೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿದ್ದರು. ಕ್ಯಾನ್ಸರ್ ಕೇರ್ ಇಂಡಿಯಾ ಟ್ರಸ್ಟ್ನಿಂದ ನೇಮಿಸಿಕೊಂಡಿದ್ದ ಸಿಬ್ಬಂದಿ ನಿಯೋಜಿಸುವ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅರ್ಹತೆ ಹೊಂದಿರುವ ಬಗ್ಗೆ ಪರಿಶೀಲಿಸದೆ ಬೇಜವಾಬ್ದಾರಿತನದಿಂದ ಇವರು ಕರ್ತವ್ಯ ಲೋಪ ಎಸಗಿದ್ದಾರೆ. ವಲಯ ಆಯುಕ್ತರ ಅನುಮೋದನೆ ಪಡೆಯದೆ ಇವರಿಬ್ಬರೂ ಕೋವಿಡ್ ಹೆಸರಿನಲ್ಲಿ ಪಾಲಿಕೆಗೆ ಹತ್ತಾರು ಲಕ್ಷ ರೂಪಾಯಿ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.