

ಬೆಂಗಳೂರು: ಸರ್ಕಾರ ನಡೆಸಲು ಹೊರಟಿರುವ ಜಾತಿಗಣತಿಯನ್ನು ದೋಷವಿಲ್ಲದಂತೆ ಸಮರ್ಪಕವಾಗಿ ನಡೆಸಬೇಕೆಮದು ನೇಕಾರ ಸಮುದಾಯದ ಕರ್ನಾಟಕ ಸೆಂಗುಂಧರ್ ಸಂಘ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸೆಂಗುಂಧರ್ ಸಂಘದ ಅಧ್ಯಕ್ಷ ಆರ್.ಕಂದಸ್ವಾಮಿ, ನೇಕಾರ ವೃತ್ತಿಯ ಪ್ರಮುಖ ಸೆಂಗುಧರ್ ಜಾತಿಯು ರಾಜ್ಯದಲ್ಲಿ 6ಲಕ್ಷ ಜನಸಂಖ್ಯೆ ಇದೆ. ನೇಕಾರ ಸಮುದಾಯಗಳು ಒಟ್ಟಾರೆ 50ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೆ ಕಳೆದ ರಾಜ್ಯ ಜಾತಿಗಣತಿಯಲ್ಲಿ ಸಮರ್ಪಕವಾಗಿ ಗಣತಿಯಾಗಿಲ್ಲ ಅದರಿಂದ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗುವ ಸಾಧ್ಯತೆ ಇದೆ. ಸೆಂಗುಂಧರ್ ಸಮುದಾಯವು ಕರ್ನಾಟಕದಾದ್ಯಂತ ಹರಡಿಕೊಂಡಿದ್ದು, ನಮ್ಮ ಪ್ರಗತಿ ಮತ್ತು ರಾಜ್ಯದ ಅಭಿವೃದ್ಧಿ ಎರಡಕ್ಕೂ ಕೊಡುಗೆ ನೀಡುತ್ತಿದೆ. ಪ್ರಸ್ತುತ, ನಮ್ಮ ಸಮುದಾಯವನ್ನು ಪ್ರವರ್ಗ2ಎ ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.15 ಮೀಸಲಾತಿಯನ್ನು ಹೊಂದಿದೆ. ಆದಾಗ್ಯೂ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ ಜಾತಿ ಜನಗಣತಿ ವರದಿಯು ನಮ್ಮ ನೇಕಾರ ಸಮುದಾಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಆದ್ದರಿಂದ ನೇಕಾರ ಸಮುದಾಯಗಳ ಒಕ್ಕೂಟದ ಮೂಲಕ ಈ ಅಂಕಿಅಂಶಗಳನ್ನು ಮರುಪರಿಶೀಲಿಸಲು ಒತ್ತಾಯಿಸಿದ್ದೇವೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ನಮ್ಮ ಹಿಂದುಳಿದ ನೇಕಾರ ಸಮುದಾಯದ ನಿಜವಾದ ಜನಸಂಖ್ಯೆಯನ್ನು ಸಕಲ ಪುರಾವೆಗಳೊಂದಿಗೆ ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಿದ್ದು, ಸಮುದಾಯದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸಮಾಜ ಬಂಧುಗಳು ನಮ್ಮ ವೆಬ್ಸೈಟ್ : http//nekaaraokkuta.in ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಸಮಾಜ ಬಾಂಧವರಿಗೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ.ಟಿ.ಪಿಚಂಡಿ, ಕಾರ್ಯದರ್ಶಿ ವಿ.ವಡಿವೇಲು, ಖಜಾಂಚಿ ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.