

ಯಲಹಂಕ: ಶನಿವಾರ (ಸೆ.13) ರಂದು ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಬೆಳಗ್ಗೆ 11ಕ್ಕೆ ಸಿಂಗನಾಯಕನಹಳ್ಳಿ ಗ್ರಾಮದ ಪುನೀತ್ ರಾಜ್‌ಕುಮಾರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ ತಿಳಿಸಿದ್ದಾರೆ.
ರೈತರು, ಮಹಿಳೆಯರು, ಕಾರ್ಮಿಕರು ಬದುಕು ರೂಪಿಸಿಕೊಳ್ಳಲು ನೆರವು, ಅಗತ್ಯ ಸಾಲಸೌಲಭ್ಯ ಹಾಗೂ ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘವು ಭಾಜನವಾಗಿದೆ.
ವಾರ್ಷಿಕ ಮಹಾಸಭೆಯ ಕುರಿತು ಮಾಹಿತಿ ನೀಡಿರುವ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ, ಮಹಾಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚನೆ, ಮಹಾಸಭೆಯ ನೋಟೀಸ್ ಓದಿ ದಾಖಲಿಸುವುದು, ಕಳೆದ ಮಹಾಸಭೆಯ ನಡವಳಿಕೆಯನ್ನು ಓದಿ ದಾಖಲಿಸುವುದು, ಪ್ರಸಕ್ತ ವರ್ಷದ ಆಡಳಿತ ಮಂಡಳಿ ವರದಿ ಮಂಡನೆ, ಲೆಕ್ಕ ಪರಿಶೋಧನಾ ವರದಿ, ಆರ್ಥಿಕ ತಖ್ತೆಗಳ ಮಂಡನೆ, ಅನುಪಾಲನಾ ವರದಿ, ಹೆಚ್ಚಿನ ಖರ್ಚಿನ ಮಂಜೂರಾತಿ, ಲಾಭಾಂಶ ಹಂಚಿಕೆ, ಅಂದಾಜು ಆಯವ್ಯಯ ಮುಂಗಡ ಪತ್ರ ಮಂಡನೆ ಮುಂತಾದ ವರದಿಗಳನ್ನು ಮಂಡಿಸಲಾಗುವುದು. ಸಂಘಕ್ಕೆ ಹೊಸದಾಗಿ ಸೇರ್ಪಡೆಯಾದವರ ಮತ್ತು ರದ್ದು ಮಾಡಿರುವ ಸದಸ್ಯರ ವಿವರ, ನಿರ್ದೇಶಕರಿಗೆ ನೀಡಲಾದ ಸಾಲಗಳು ಮತ್ತು ಸುಸ್ತಿ ಸಾಲಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ, ಪ್ರಸಕ್ತ ಸಾಲಿಗೆ ಲೆಕ್ಕ ಪರಿಶೋಧಕರನ್ನು ನೇಮಿಸಿಕೊಳ್ಳುವ ವಿಚಾರಗಳನ್ನು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಬೈಲಾ ತಿದ್ದುಪಡಿಯಂತೆ ಸದಸ್ಯರ ಅಧಿಕೃತ ಷೇರು ಬಂಡವಾಳವನ್ನು ರೂ.6 ಕೋಟಿಯಿಂದ 8 ಕೋಟಿಗೆ ಹೆಚ್ಚಿಸುವ ವಿಚಾರ, ಮಾರಸಂದ್ರದಲ್ಲಿ ಬ್ಯಾಂಕಿನ ಕಟ್ಟಡ ನಿರ್ಮಿಸುವ ವಿಚಾರ, ಚಿಕ್ಕ ಬೆಟ್ಟಹಳ್ಳಿ ಶಾಖೆಯ ಹಳೆಯ ಕಟ್ಟಡ ತೆರವುಗೊಳಿಸಿ ವಾಣಿಜ್ಯ ಕಟ್ಟಡ ನಿರ್ಮಿಸುವ ಬಗ್ಗೆ ಸಹ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಉಳಿದಂತೆ ಸದಸ್ಯರಿಂದ ಲಿಖಿತ ರೂಪದಲ್ಲಿ ಬಂದಿರುವ ಅರ್ಜಿಗಳ ಕುರಿತು ಚರ್ಚಿಸಲಾಗುವುದು ಎಲ್ಲ ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಮನವಿ ಮಾಡಿದ್ದಾರೆ.