

ತುಮಕೂರು: ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟ ದುರಂತವನ್ನು ಮುಚ್ಚಿಹಾಕಲು ಜಾತಿ ಗಣತಿಯನ್ನು ಅಡ್ಡ ತೆಗೆದುಕೊಂಡು ಬಂದಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಹೇಳಿದರು.
ರಾಜ್ಯದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಹತ್ತಿರ ದುಡ್ಡು ಹೆಚ್ಚಾಗಿದೆ ಅಂತಾ ಕಾಣುತ್ತೆ. ಈಗಾಗಲೇ 2013 ರಲ್ಲಿ ಇದೇ ಸರ್ಕಾರ 168 ಕೋಟಿ ಖರ್ಚು ಮಾಡಿ ಜಾತಿಗಣತಿ ಮಾಡಿತ್ತು. ಇವತ್ತಿನವರೆಗೆ ಅದನ್ನು ಯಾಕೆ ಜಾರಿಗೊಳಿಸಿಲ್ಲ? ಯಾಕಂದ್ರೆ ಈ ಜಾತಿಗಣತಿ ಅವೈಜ್ಞಾನಿಕವಾಗಿದೆ ಎಂಬುದು ನಿಜವಾಗಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದು ಲಿಂಗಾಯತ, ಒಕ್ಕಲಿಗ, ಹಿಂದುಳಿದ ಬಹಳಷ್ಟು ಸಮುದಾಯಗಳು ವಿರೋಧ ಮಾಡಿದ್ದವು. ಹಾಗಾಗಿ ಸಿದ್ದರಾಮಯ್ಯ ಇದನ್ನ ಜಾರಿಗೊಳಿಸಲಿಕ್ಕೆ ಆಗಲಿಲ್ಲ. ಆದರೆ, ಯಾವುದೇ ಕಾರಣಕ್ಕು ಈ ಜಾತಿಗಣತಿಯನ್ನು ಮೂಲೆ ಗುಂಪು ಮಾಡಲಿಕ್ಕೆ ಸಾಧ್ಯವಿಲ್ಲವೆಂದಿದ್ದರು. ಕಾಂತರಾಜು ವರದಿಗೆ ಜಯಪ್ರಕಾಶ್ ಹೆಗ್ಡೆ ವರದಿ ಅಂತಾ ಹೇಳಿ ಪಟ್ಟ ಕಟ್ಟಿ ಆ ಹೆಸರಿನಲ್ಲಿ ಇದನ್ನ ಜಾರಿಗೊಳಿಸಲು ಹೋದರು. ಈಗ ಆರ್ಸಿಬಿ ವಿಜಯೋತ್ಸವ ದುರಂತ ಪ್ರಕರಣ ಮುಚ್ಚಿಹಾಕಲು ಜಾತಿ ಗಣತಿಯನ್ನು ಅಡ್ಡ ತೆಗೆದುಕೊಂಡು ಬಂದಿದ್ದಾರೆ ಎಂದರು.
ಬಿಜೆಪಿ ಜಾತಿಗಣತಿಗೆ ವಿರೋಧವಿಲ್ಲ: ಜಾತಿಗಣತಿ ಮಾಡಬೇಕು, ಅದನ್ನ ಜಾರಿಗೊಳಿಸಬೇಕು. ಆದರೆ ಇಂತಹ ದುರ್ಘಟನೆ ನಡೆದ ಸಂದರ್ಭದಲ್ಲಿ ಜಾರಿ ತರಲು ಹೊರಟಿರುವುದು ತಪ್ಪನ್ನು ಮುಚ್ಚಿಕೊಳ್ಳುವ ಉದ್ದೇಶವಿರುವುದು ಸ್ಪಷ್ಟ. ಈಗಾಗಲೇ ಕೇಂದ್ರ ಸರ್ಕಾರವು ಜಾತಿಗಣತಿ ಮಾಡುವುದಾಗಿ ಘೋಷಿಸಿದ್ದು 6 ತಿಂಗಳಲ್ಲಿ ದೇಶಾದ್ಯಂತ ಪೂರ್ತಿ ಮಾಡುವುದಾಗಿ ಹೇಳಿದೆ. ಈಗ ನೀವು ಹೊಸದಾಗಿ ಜಾತಿ ಗಣತಿ ಮಾಡುತ್ತೀವಿ ಅನ್ನುತ್ತಿದ್ದೀರಾ. ಯಾಕೆ ಅನಗತ್ಯ ಹಣ ವ್ಯರ್ಥ ಮಾಡುವಿರಾ? ಈಗಾಗಲೇ ಕೈ ಸುಟ್ಟು ಕೊಂಡಿದ್ದೀರಾ ಮತ್ತೆ ಯಾಕೆ ಮೈ ಸುಟ್ಟುಕೊಳ್ತೀರಾ? ರಾಜ್ಯ ಸರ್ಕಾರ ಹಣ ಖರ್ಚು ಮಾಡಿ ಮತ್ತೆ ಜಾತಿ ಗಣತಿ ಮಾಡುವುದು ಸರಿಯಲ್ಲ ಎಂದು ರವಿಕುಮಾರ್ ತಿಳಿಸಿದರು.