

ತುಮಕೂರು: ಜಿಲ್ಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಶೇ.70ರಷ್ಟು ಪೂರ್ಣಗೊಂಡಿದೆ ಎಂದು ಆಯೋಗದ ಸದಸ್ಯ ಜಿ.ಎನ್.ಶ್ರೀಕಂಠಯ್ಯ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಕಿ ಅಂಶಗಳನ್ನು ಅವಲೋಕಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 7,55,483 ಮನೆಗಳಿದ್ದು, ಈಗಾಗಲೇ 5,23,091 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಮನೆಗಳ ಸಮೀಕ್ಷಾ ಕಾರ್ಯ ಅಕ್ಟೋಬರ್ 7ರೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಮೀಕ್ಷೆ ವೇಳೆ ಸಣ್ಣಪುಟ್ಟ ಅಡೆತಡೆಗಳು ಎದುರಾದರೂ, ಅಧಿಕಾರಿಗಳು ಹಾಗೂ ಗಣತಿದಾರರು ಅದನ್ನು ಸಮರ್ಥವಾಗಿ ಎದುರಿಸಿ ಸಮೀಕ್ಷೆ ಪ್ರಗತಿಯತ್ತ ಸಾಗಿಸುತ್ತಿದ್ದಾರೆ. ಹಿಂದುಳಿದ ವರ್ಗದ ಜನರಿಗೆ ಸರ್ಕಾರಿ ಸೌಲಭ್ಯಗಳು ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ತಿಳಿಯಲು ಈ ಸಮೀಕ್ಷಾ ಕಾರ್ಯವನ್ನು ಸರ್ಕಾರ ಕೈಗೊಂಡಿದೆ. ಸಮೀಕ್ಷೆಯ ಸಮಗ್ರ ದತ್ತಾಂಶ ಮುಂದಿನ 20 ರಿಂದ 30 ವರ್ಷಗಳವರೆಗೂ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಾರ್ಗದರ್ಶಕವಾಗಲಿದೆ. ರಾಜ್ಯ ಸರ್ಕಾರ ಕಡಿಮೆ ಅವಧಿಯಲ್ಲಿ ಇಂತಹ ಮಹತ್ವದ ಸಮೀಕ್ಷೆ ಕೈಗೊಂಡಿರುವುದು ಶ್ಲಾಘನೀಯ, ಜಿಲ್ಲೆಯಲ್ಲಿ ಶಿಕ್ಷಕರ ಪರಿಶ್ರಮದಿಂದ ಸಮೀಕ್ಷೆ ಯಶಸ್ವಿಯಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತಹಸೀಲ್ದಾರ್ ರಾಜೇಶ್ವರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಈರಣ್ಣ ಆಶಾಪುರ್ ಮತ್ತಿತರರು ಇದ್ದರು.