ವೈಜ್ಞಾನಿಕವಾಗಿ ಮತ್ತೊಮ್ಮೆ ಗಣತಿ ಮಾಡಲಿ

Siddalinga_Swamiji_Ayodhya
Published on

ತುಮಕೂರು: ಹತ್ತು ವರ್ಷದ ಹಿಂದೆ ನಡೆಸಿರುವ ಸಮೀಕ್ಷೆ ವರದಿಯನ್ನು ಈಗ ಪ್ರಕಟಿಸುತ್ತಿರುವುದು ನ್ಯಾಯಯೋಚಿತ ಎನ್ನಿಸುತ್ತಿಲ್ಲ. ಹಾಗಾಗಿ, ಈ ಬಗ್ಗೆ ಸಾಕಷ್ಟು ಸಮುದಾಯಗಳಿಗೆ ಅನುಮಾನಗಳಿದ್ದು ಸರ್ಕಾರ ವೈಜ್ಞಾನಿಕವಾಗಿ ಮತ್ತೊಮ್ಮೆ ಗಣತಿ ಮಾಡಿದರೆ ಒಳ್ಳೆಯದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ ಸಲಹೆ ನೀಡಿದರು.

ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ರಾಜ್ಯ ದಲ್ಲಿ ಸರ್ಕಾರ ಸಮಿತಿ ರಚನೆ ಮಾಡಿ ಜಾತಿಗಣತಿ ಮಾಡಿ ಅದರ ಆಧಾರದ ಮೇಲೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿನ್ನೆಲೆ ತಿಳಿದುಕೊಂಡು ಆಯಾ ವರ್ಗಗಳಿಗೆ ನ್ಯಾಯ ಒದಗಿಸಬೇಕೆನ್ನುವಂತದ್ದು ಶ್ಲಾಘನೀಯವಾಗಿರುವ ಕಾರ್ಯ. ಆದರೆ ಈಗಿನ ಈ ಜಾತಿ ಗಣತಿಯ ವಿಚಾರವಾಗಿ ಬಹುತೇಕ ಎಲ್ಲರೂ ನಮಗೆ ಗೊತ್ತಿಲ್ಲ, ನಮಗೆ ಕೇಳಿಲ್ಲ, ನಮಗೇನು ವಿಚಾರ ಮಾಡಿಲ್ಲ, ನಮ್ಮ ಮನಗೆ ಬಂದಿಲ್ಲ ಎಂದು ಬಹಳ ಜನ ಹೇಳುತ್ತಿದ್ದಾರೆ ಎಂದರು.

ಎಲ್ಲೋ ಒಂದು ಕಡೆ ಸಮೀೆ ನಡೆಸುವವರು ಎಲ್ಲರನ್ನೂ ತಲುಪಿಲ್ಲ, ಜಾತಿಗಣತಿ ಎಲ್ಲರ ಗಮನಕ್ಕೂ ಬಂದಿಲ್ಲ ಎನ್ನುವಂತದ್ದು ಬಹಳ ಜನರ ಮನಸ್ಸಿನಲ್ಲಿದೆ. ಈ ಗೊಂದಲವನ್ನ ನಿವಾರಣೆ ಮಾಡಿ, ಪ್ರತಿಯೊಬ್ಬರನ್ನು ಭೇಟಿ ಮಾಡಿ ಯಾರಿಗೂ ಅನ್ಯಾಯವಾಗದಂತೆ ಎಲ್ಲರಿಗೂ ನ್ಯಾಯ ಒದಗಿಸಿಕೊಡುವಂತಹ ಕೆಲಸ ಮಾಡಿದರೆ ತುಂಬಾ ಒಳ್ಳೆಯದು ಎಂದು ತಿಳಿಸಿದರು.

ಎಲ್ಲಾ ಸಮಾಜದಲ್ಲೂ ಹಿಂದುಳಿದವರು, ಬಡವರು, ನಿರ್ಗತಿಕರು ಇದ್ದಾರೆ. ಅವರೆಲ್ಲರಿಗೂ ಕೂಡ ಅವರವರ ಹಂತದಲ್ಲಿ ಅವರಿಗೆ ಆರ್ಥಿಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಅವರಿಗೂ ನೌಕರಿ, ಉತ್ತಮ ಶಿಕ್ಷಣ ಒದಗಿಸಿಕೊಡಬೇಕಿದೆ. ಎಲ್ಲವೂ ಆದಾಗ ಎಲ್ಲರೂ ಆರೋಗ್ಯಪೂರ್ಣ ವಾಗಿ ಸ್ವಸ್ಥ ಸಮಾಜ ನಿಮಾರ್ಣ ಮಾಡಲು ಸಾಧ್ಯ, ಆ ಹಿನ್ನೆಲೆಯಲ್ಲಿ ಅಸಮಾನತೆ ಹೋಗಲಾಡಿಸಬೇಕು, ಸಮಾನತೆ ತರಬೇಕು ಎಂದರು.

ಹಿಂದುಳಿದವರನ್ನ ಮುಂದೆತರಬೇಕು, ಬಡವರನ್ನ ಮೇಲೆತ್ತಬೇಕು ಎನ್ನುವಂತಹ ಉದ್ದೇಶ ಒಳ್ಳೆಯದಾಗಿದೆ. ನಮ್ಮ ಸಂವಿಧಾನದ ನೀತಿಯೂ ಅದೇ ಆಗಿರುವಂತದ್ದು. ಆ ಹಿನ್ನೆಲೆಯಲ್ಲಿ ಜಾತಿಗಣತಿ ಮಾಡಿ ಅದನ್ನ ಮತ್ತೊಮ್ಮೆ ವೈಜ್ಞಾನಿಕ ವಾಗಿ ಎಲ್ಲರನ್ನೂ ಕೇಳಲಿ, ಪ್ರತಿಯೊಬ್ಬರನ್ನ ವಿಚಾರ ಮಾಡಿ ಆ ಮೂಲಕ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗೂ ಇದೆ ಎಂದು ಶ್ರೀಗಳು ಹೇಳಿದರು.

10 ವರ್ಷದ ಹಿಂದಿನ ವರದಿ ಇಟ್ಟುಕೊಂಡು ಈಗ ಯಾಕೆ ಪ್ರಕಟ ಮಾಡುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗಿಲ್ಲ, 10 ವರ್ಷಗಳಲ್ಲಿ ಸಮಾಜದಲ್ಲಿ ಅದೆಷ್ಟೊ ಬದಲಾವಣೆ ಆಗಿರಬಹುದು. ಜನಸಂಖ್ಯೆಯೂ ಹೆಚ್ಚಾಗಿರಬಹುದು, ಬಗ್ಗೆ ಹೊಸದಾಗಿ ಸಂಪುಟ ಸಭೆಯಲ್ಲಿ ತೀಮಾರ್ನ ಮಾಡಬೇಕು ಎಂದು ಸಿದ್ದಲಿಂಗ ಶ್ರೀಗಳು ತಿಳಿಸಿದರು.

ವಿವಿಧ ಸಮುದಾಯ ನಾಯಕರ ವಿರೋಧ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು, ಸಮೀೆ ಬಗ್ಗೆ ನಮ್ಮನ್ನು ಕೇಳಿಲ್ಲ, ಗೊತ್ತಿಲ್ಲ, ನಮ್ಮ ಸಂಖ್ಯೆಯನ್ನೆ ಕಡಿಮೆ ಮಾಡಿದ್ದಾರೆ. ಸಂಖ್ಯೆಯಲ್ಲಿ ಇಷ್ಟು ದಿನ ಡಬ್ಬಲ್​ ಸಂಖ್ಯೆ ಇದ್ದೋರನ್ನ ಅರ್ಧ ಸಂಖ್ಯೆಗೆ ತಂದು ಕೂರಿಸಿದ್ದಾರೆ. ಏನೆನೋ ನಡಿತಾ ಇದೆ, ಅದನ್ನ ಸರಿಪಡಿಸಿಕೊಂಡು ಹೋದ್ರೆ ಒಳ್ಳೆಯದು ಎಂದರು.

ಪ್ರಸ್ತುತ ದೇಶದಲ್ಲಿ ಜಾತಿ ಬಿಟ್ಟರೆ ಬೇರೆ ಏನು ನಡೆಯುತ್ತಿಲ್ಲ, ಜಾತಿ ಆಧಾರದಲ್ಲಿಯೇ ಎಲ್ಲವೂ ನಡೆಯುವುದು ಹೋಗಬೇಕು, ವಿದ್ಯಾವಂತ ಸಮಾಜ ನಿರ್ಮಾಣವಾಗುವಾಗ ಜಾತಿ ಪದ್ಧತಿ ಕಡಿಮೆಯಾಗಬೇಕು ಆದರೆ, ಜಾಸ್ತಿಯಾಗುತ್ತಲೇ ಇದೆ. ಜಾತಿ ಬಿಟ್ಟು ಬದುಕುವುದು ಸಾಧ್ಯವಿಲ್ಲ ಎನ್ನುವಂತಿದೆ. ಭವಿಷ್ಯದಲ್ಲಿ ಏನು ಆಗಲಿದೆಯೊ ಗೊತ್ತಿಲ್ಲ. ಬಸವಣ್ಣ, ಅಂಬೇಡ್ಕರ್​ ಅವರು ಹೇಳಿದಂತೆ ಜಾತಿ ಬಿಡಬೇಕು, ಎಲ್ಲಾ ಜಾತಿಯಲ್ಲಿಯೂ ಬಡವರಿದ್ದು ಎಲ್ಲರಿಗೂ ಅನುಕೂಲವಾಗಬೇಕು. ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net