

ಬೆಳಗಾವಿ: ವ್ಯಕ್ತಿಯೊಬ್ಬ ಸೊಂಟಕ್ಕೆ ರಿವಾಲ್ವರ್ ಸಿಕ್ಕಿಸಿಕೊಂಡು ಸುತ್ತಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು, ಕೆಲವು ಕಾಲ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದ್ದ. ಬೆಳಗಾವಿ ಖಡೇಬಜಾರ ಎಂಬಲ್ಲಿ ಈ ದೃಶ್ಯಾವಳಿ ಕಂಡುಬಂದಿದ್ದು, ಹನುಮಂತ ಮುಜುಕರ್ ಎಂಬಾತನೇ ಆತಂಕ ಸೃಷ್ಟಿಸಿರುವ ವ್ಯಕ್ತಿ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ವ್ಯಕ್ತಿ ಹೀಗೆ ರಿವಾಲ್ವರ್ ಸೊಂಟಕ್ಕೆ ಸಿಕ್ಕಿಸಿಕೊಂಡು ಓಡಾಡಿದ್ದ. ಖಡೇಬಜಾರ ಪ್ರದೇಶದಲ್ಲಿ ಓಡಾಡುತ್ತಿದ್ದ ಈತ ರಿವಾಲ್ವರ್ ಪ್ರದರ್ಶಿಸಿ ಅಲ್ಲಿನ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ. ಈತ ಹೀಗೆ ರಿವಾಲ್ವರ್ ಇಟ್ಟುಕೊಂಡು ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ವೈರಲ್ ವಿಡಿಯೋ ಗಮನಿಸಿ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ, ಚುನಾವಣೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಠಾಣೆಗೆ ಒಪ್ಪಿಸುವಂತೆ ಸೂಚಿಸಿದ್ದರೂ ಯಾಕೆ ಹಾಗೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಬಳಿಕ ರಿವಾಲ್ವರ್ ವಶಕ್ಕೆ ಪಡೆದ ಪೊಲೀಸರು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ರಿವಾಲ್ವರ್ ಲೈಸೆನ್ಸ್ ಕೂಡ ರದ್ದುಗೊಳಿಸಿದ್ದಾರೆ.