ಹಾವೇರಿ: ಪತಿ ವಿರುದ್ಧವೇ ಅತ್ಯಾಚಾರ ಪ್ರಕರಣ ದಾಖಲಿಸಿದ ಯುವತಿ!

Rape
Published on

ಹಾವೇರಿ: ಪೊಲೀಸರಿಂದಲೇ ಪತ್ನಿ ಕಿಡ್ನಾಪ್ ಆಗಿದ್ದಾಳೆ ಎಂದು ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದೆ. ಪತಿ ಎಂದು ಹೇಳಿಕೊಂಡ ಯುವಕ ಸೇರಿ ಐವರ ವಿರುದ್ಧವೇ ಅಪಹರಣವಾಗಿದ್ದಾಳೆ ಎನ್ನಲಾದ ಯುವತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.

ನಗರದ ವೀರೇಶ ಜಯಪ್ಪ ಅಡಿವೆಪ್ಪನವರ (21) ಹಾಗೂ ಈತನ ಐವರು ಸ್ನೇಹಿತರ ವಿರುದ್ಧ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಯುವತಿ ಪ್ರಕರಣ ದಾಖಲಿಸಿದ್ದಾಳೆ.

ವೀರೇಶ ಎಂಬಾತ 2018ರ ಹಿಂದೆ ಯುವತಿಯ ಮನೆಗೆ ಹೋಗಿ-ಬಂದು ಮಾಡುತ್ತಿದ್ದ. ಈ ಸಮಯದಲ್ಲಿ ಯುವತಿ ಯೊಂದಿಗೆ ಸಲುಗೆ ಬೆಳೆಸಿಕೊಂಡು ಆಕೆಯ ಖಾಸಗಿ ಫೋಟೋ ಹಾಗೂ ವಿಡಿಯೋ ಮಾಡಿಕೊಂಡಿದ್ದ. ಅಲ್ಲದೆ, ಆಗ ಯುವತಿಯು ಅಪ್ರಾಪ್ತೆ ಎಂದು ಗೊತ್ತಿದ್ದರೂ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಮಾಡಿದ್ದ ಎಂದು ಆರೋಪಿಸಲಾಗಿದೆ.

ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ, ಆಕೆಯ ಕುಟುಂಬದವರ ಮರ್ಯಾದೆ ತೆಗೆಯುತ್ತೇನೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯುವತಿ ವಯಸ್ಕಾಳದ ನಂತರ ಹೆದರಿಸಿ ಕಳೆದ ಮಾ. 7ರಂದು ರಾಣೆಬೆನ್ನೂರ ಉಪ ನೋಂದಣಿ ಕಚೇರಿಯಲ್ಲಿ ಸುಳ್ಳು ದಾಖಲೆ ನೀಡಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಾನೆ ಎಂದು ದೂರಲಾಗಿದೆ.
ವಿವಾಹ ನೋಂದಣಿಗೆ ಸಹಿ ಮಾಡದಿದ್ದರೆ ತಾಯಿ, ಮಗಳನ್ನು ಕೊಲೆ ಮಾಡುವುದಾಗಿ ವೀರೇಶ ಹಾಗೂ ಆತನ ಐವರು ಸ್ನೇಹಿತರು ಬೆದರಿಕೆ ಹಾಕಿದ್ದರು ಎಂದು ನೊಂದ ಯುವತಿ ದಾವಣಗೆರೆ ಮಹಿಳಾ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಮಹಿಳಾ ಠಾಣೆ ಪೊಲೀಸರು ತನಿಖೆಗಾಗಿ ಪ್ರಕರಣವನ್ನು ಹಾವೇರಿ ಮಹಿಳಾ ಠಾಣೆಗೆ ವರ್ಗಾಯಿಸಿದ್ದಾರೆ. ಈ ಕುರಿತು ಹಾವೇರಿ ಮಹಿಳಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ದೂರು ನೀಡಿರುವ ಯುವತಿ ನನ್ನ ಪತ್ನಿ. ಈಕೆಯನ್ನು ಶಿವಮೊಗ್ಗ ಪೊಲೀಸರು ಎಂದು ಹೇಳಿಕೊಂಡು ಬಂದ ನಾಲ್ವರು ಅಪಹರಣ ಮಾಡಿದ್ದಾರೆ’ ಎಂದು ಆರೋಪಿಸಿ ವೀರೇಶ ಏ. 2ರಂದು ರಾಣೆಬೆನ್ನೂರ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಇದೀಗ ವೀರೇಶನ ವಿರುದ್ಧವೇ ಯುವತಿ ದೂರು ನೀಡಿರುವುದರಿಂದ ಪ್ರಕರಣ ಭಾರಿ ತಿರುವು ಪಡೆದುಕೊಂಡಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net