

ದಾವಣಗೆರೆ: ಎತ್ತಿಗೆ ಜ್ವರ, ಎಮ್ಮೆಗೆ ಬರೆ ಎಂಬ ಗಾದೆಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ. ಕೋವಿಡ್ ನಿಯಮವನ್ನು ಉಲ್ಲಂಘಿಸಿ ಪುತ್ರಿಯ ಮದುವೆ ಮಾಡಿಸಿದ ಶಾಸಕರ ಮೇಲೆ ಪ್ರಕರಣ ದಾಖಲಿಸುವ ಬದಲು, ಅವರ ಪುತ್ರನ ಮೇಲೆ ಕೇಸ್ ಜರುಗಿಸಿ, ದಂಡ ವಿಧಿಸಿದ ವಿಷಯ ಬಹಿರಂಗಗೊಂಡಿದೆ. ಇಂಥದ್ದೊಂದು ಮದುವೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಾಕ್ಷಿಯಾಗಿದ್ದಾರೆ.
ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರಾಮಪ್ಪ ಅವರ ಪುತ್ರಿಯ ಮದುವೆ ಜುಲೈ 2ರಂದು ಸ್ಥಳೀಯ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಕೋವಿಡ್ ಮಾರ್ಗಸೂಚಿಗಳ ಪಾಲನೆಯಾಗಿಲ್ಲ. ಅಲ್ಲದೆ ಈ ವಿವಾಹಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ ಸಂದರ್ಭದಲ್ಲಂತೂ ಭಾರಿ ನೂಕುನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹರಿಹರ ಪೊಲೀಸ್ ಠಾಣೆ ಎಸ್ಐ ಸುನೀಲ್ ಬಿ. ತೇಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.
ವಿಚಿತ್ರವೆಂದರೆ ಈ ಪ್ರಕರಣದಲ್ಲಿ ಮದುವೆ ಮಾಡಿಸಿದ್ದ ಶಾಸಕರ ಬದಲು, ಅವರ ಪುತ್ರ ಯತಿರಾಜ್ ವಿರುದ್ಧ ದೂರು ದಾಖಲಿಸಲಾಗಿದೆ. ಆ ಮೂಲಕ ಶಾಸಕರನ್ನು ಈ ಪ್ರಕರಣದಿಂದ ಬಚಾವಾಗಿಸಲು ತಾಲೂಕು ಹಾಗೂ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಶಾಸಕರ ಪುತ್ರ ಯತಿರಾಜ್ಗೆ 10 ಸಾವಿರ ರೂ. ಹಾಗೂ ಕಲ್ಯಾಣಮಂಟಪದ ಮಾಲೀಕ ಅರುಣ್ಕುಮಾರ್ಗೆ 5 ಸಾವಿರ ರೂ. ದಂಡ ವಿಧಿಸಿ, ನೋಟಿಸ್ ನೀಡಲಾಗಿದೆ.