

* ದೂರು ದಾಖಲಿಸಲು ವಿಳಂಬ ಆರೋಪ
ರಾಮನಗರ
ಮಾಗಡಿ ತಾಲೂಕಿನ ಬೀಚನಹಳ್ಳಿಯ ಮನೆಯೊಂದರ ಮಲದ ಗುಂಡಿಗೆ ಪೌರ ಕಾರ್ಮಿಕರನ್ನು ಬಲವಂತವಾಗಿ ಇಳಿಸಿ ಸ್ವಚ್ಛಗೊಳಿಸಿರುವ ಟನೆ ಸಂಬಂಧ 5 ಮಂದಿ ವಿರುದ್ಧ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ದೂರು ದಾಖಲಿಸಲು ವಿಳಂಬ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ತಾಲೂಕಿನ ಹುಳ್ಳೆನಹಳ್ಳಿ ಗ್ರಾಮ ಪಂಚಾಯಿತಿಯ ಮೂವರು ಪೌರ ಕಾರ್ಮಿಕರನ್ನು ವಾರದ ಹಿಂದೆ ಮನೆಯೊಂದರ ಮಲದ ಗುಂಡಿಗೆ ಇಳಿಸಿದ್ದ ಪ್ರಕರಣ ನಡೆದಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ದೂರು ನೀಡಿದರೂ, ಪ್ರಕರಣ ದಾಖಲಿಸಲು ಕುದೂರು ಠಾಣೆಯಲ್ಲಿ ವಿಳಂಬ ಮಾಡಲಾಗಿದೆ ಎಂದು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ಅನುಷ್ಠಾನಕ್ಕೆ (ಎಂ.ಎಸ್ ಕಾಯ್ದೆ) ಸಂಬಂಧಿಸಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸದಸ್ಯರು ಆರೋಪಿಸಿ ಕ್ರಮಕ್ಕೆ ಪಟ್ಟು ಹಿಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಕಾಯ್ದೆ ಪ್ರಕಾರ ಕೂಡಲೇ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆ ಮಾಲೀಕ ಶ್ರೀನಿವಾಸ್, ಪತ್ನಿ ವಿಜಯಲಕ್ಷ್ಮೀ , ಪುತ್ರರಾದ ಪ್ರದಿಪ್, ಕೃಷ್ಣಮೂರ್ತಿ ಹಾಗೂ ಗುಂಡಿಗಿಳಿಸಲು ಪ್ರೇರಣೆ ನೀಡಿದ್ದಕ್ಕಾಗಿ ಅಂಕಯ್ಯನಪಾಳ್ಯದ ವಿಜಯಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಶ್ರೀನಿವಾಸ್ ಮನೆಯ ಶೌಚಗೃಹದ ಗುಂಡಿ ಭರ್ತಿಯಾಗಿತ್ತು. ಅದನ್ನು ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರ ಕರೆಯಿಸುವ ಬದಲು, ಕುದೂರು ಗ್ರಾಪಂ ಟ್ರ್ಯಾಕ್ಟರ್ ಚಾಲಕರಾದ ಪರಿಶಿಷ್ಟ ಜಾತಿಯ ಯೋಗೇಶ್, ಪ್ರವಿಣ್ ಹಾಗೂ ಪರಿಶಿಷ್ಟ ಪಂಗಡದ ನರಸಿಂಹಮೂರ್ತಿ ಅವರನ್ನು ಪಂಚಾಯಿತಿ ಟ್ರ್ಯಾಕ್ಟರ್ ಸಮೇತ ಸ್ಥಳಕ್ಕೆ ಕರೆಯಿಸಿದ್ದರು. ಮೂವರೂ ಮಲದ ಗುಂಡಿಗೆ ಇಳಿದು ಗುದ್ದಲಿ ಹಾಗೂ ಪ್ಲಾಸ್ಟಿಕ್ ಬುಟ್ಟಿ ಮೂಲಕ ಮಲವನ್ನು ತೆರವು ಮಾಡಿ ಸ್ವಚ್ಛಗೊಳಿಸಿದ್ದಾರೆ. ಈ ಕುರಿತ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ವಿಷಯ ಗೊತ್ತಾಗುತ್ತಿದ್ದಂತೆ ಜು.28ರಂದು ಸ್ಥಳಕ್ಕೆ ತೆರಳಿ ಮಹಜರು ಮಾಡಲಾಯಿತು. ನಂತರ ಠಾಣೆಗೆ ತೆರಳಿ ಐವರ ವಿರುದ್ಧ ಎಂ.ಎಸ್ ಕಾಯ್ದೆ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಉಮಾ ದೂರು ನೀಡಿದ್ದರು. ಆದರೆ, ಪ್ರಕರಣ ದಾಖಲಿಸಿಕೊಳ್ಳದ ಠಾಣೆ ಇನ್ಸ್ಪೆಕ್ಟರ್, ಉಪ ವಿಭಾಗಾಧಿಕಾರಿ ಗಮನಕ್ಕೆ ತನ್ನಿ ಎಂದು ಹೇಳಿ ಕಳಿಸಿದ್ದರು ಎನ್ನಲಾಗಿದೆ.