ಬಂಟ್ವಾಳ: ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ ಆರೋಪದಡಿ ಸಜೀಪ ಮುನ್ನೂರು ನಿವಾಸಿ ಉಮರ್ ಫಾರೂಕ್(48) ಎಂಬುವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 11ರಂದು ಜೀಪ್‌ನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜೀಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ತನ್ನ ಮೇಲೆ ತಲವಾರು ಬೀಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಉಮ್ಮರ್ ಫಾರೂಕ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ತನಿಖೆ ನಡೆಸಿದಾಗ ಇದೊಂದು ಸುಳ್ಳು ಪ್ರಕರಣವೆಂದು ಸಾಬೀತಾಗಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಉಮರ್ ಫಾರೂಕ್ (48) ಸಾರ್ವಜನಿಕರನ್ನು ಗಲಭೆ ಉಂಟಾಗುವಂತೆ ಪ್ರಚೋದಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಯಭೀತಿ ಸೃಷ್ಟಿಸಿತ್ತು. ಜತೆಗ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದನೆ ಮಾಡಿ ಸುಳ್ಳು ದೂರು ನೀಡಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಟ್ವಾಳ ಎಸಿಜೆ ಮತ್ತು ಜೆಎಂಎಪ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನಿಗೆ ಸೆ.6ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.