ಕಾಸರಗೋಡಿಗೆ ಕರಾಳ ದಿನ : ಒಂದೇ ದಿನ ಒಂಬತ್ತು ಮಂದಿ ಸಾವು

Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮಂಜೇಶ್ವರ ಹಾಗೂ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿರುವ ಎರಡು ಪ್ರತ್ಯೇಕ ದುರಂತದಲ್ಲಿ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ.

ತಲಪಾಡಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದರೆ, ಅಂಬಲತ್ತರದಲ್ಲಿ ಆ್ಯಸಿಡ್ ಸೇವಿಸಿ ಮೂವರು ಆತ್ಮಹತ್ಯೆಗೈಯುವ ಮೂಲಕ ಗುರುವಾರ ಜಿಲ್ಲೆಗೆ ಕರಾಳ ದಿನವಾಗಿತ್ತು.

ತಲಪಾಡಿಯಲ್ಲಿ ನಿಯಂತ್ರಣ ಕಳೆದುಕೊಂಡ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್, ನಿಂತಿದ್ದ ಆಟೋರಿಕ್ಷಾ ಹಾಗೂ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಡಿಕ್ಕಿಯಾಗಿ ಬಾಲಕಿ ಸೇರಿದಂತೆ ಆರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಆಟೋ ಚಾಲಕ ಹೈದರಾಲಿ(47), ಆಟೋ ರಿಕ್ಷಾದಲ್ಲಿದ್ದ ನಫೀಸಾ(52), ಆಯಿಷಾ ಹಿದಾ(19), ಖದೀಜಾ(60), ಹವ್ವಮ್ಮ(72) ಹಾಗೂ ಹಸೀನಾ(11) ಮೃತಪಟ್ಟವರು.

ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಮೊದಲು ಆಟೋ ರಿಕ್ಷಾಗೆ ಡಿಕ್ಕಿಯಾಗಿ, ನಂತರ ಸನಿಹದ ಬಸ್ ನಿಲ್ದಾಣ ಕಟ್ಟಡಕ್ಕೆ ಡಿಕ್ಕಿಯಾಗಿದೆ. ಮೃತದೇಹಗಳನ್ನು ಮಂಜೇಶ್ವರ ತಾಲೂಕು ಆಸ್ಪತ್ರೆ ಹಾಗೂ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಅಪಘಾತದಿಂದ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಸಿಸಿ ಕ್ಯಾಮರಾ ದೃಶ್ಯಾವಳಿ ಲಭ್ಯವಾಗಿದ್ದು, ಬಸ್ ವೇಗದಿಂದ ಸಂಚರಿಸುತ್ತಿತ್ತೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಮಂಜೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net