ಕೋವಿಡ್ ಕರ್ತವ್ಯಕ್ಕೆ ಗೈರಾದರೆ ಮೊಕದ್ದಮೆ

29-hvr-09
Published on

ಹಾವೇರಿ: ಕರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ವಿವಿಧ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು, ನೌಕರರು ಗೈರಾದರೆ ವಿಪತ್ತು ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಎಚ್ಚರಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ನಂತರ ಕೋವಿಡ್ ನಿಯಂತ್ರಣ ದೈನಂದಿನ ಪ್ರಗತಿ ಮಾಹಿತಿ ಪಡೆದುಕೊಂಡ ಅವರು ಕರ್ತವ್ಯಕ್ಕೆ ನೇಮಕಗೊಂಡವರು ಗೈರಾಗುತ್ತಿರುವುದನ್ನು ಗಮನಿಸಿ ಈ ಎಚ್ಚರಿಕೆ ನೀಡಿದರು.

ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ಬಂದವರ ಮಾಹಿತಿ ಸಂಗ್ರಹ, ತಪಾಸಣೆ, ಸೋಂಕಿತರ ಸಂಪರ್ಕ ಪತ್ತೆ ಕಾರ್ಯ ತ್ವರಿತಗೊಳಿಸಿ ನಿಖರವಾಗಿ ದಾಖಲಿಸಬೇಕು. ಕೋವಿಡ್ ಪ್ರಕರಣಗಳ ನಿರ್ವಹಣೆಗೆ ಜಿಲ್ಲೆಗೆ ಅಗತ್ಯವಾಗಿ ಬೇಕಾದ ವೈದ್ಯಕೀಯ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಬೇಕು. ಎಂಬಿಬಿಎಸ್ ವೈದ್ಯರು ದೊರೆಯದಿದ್ದರೆ ಬಿಡಿಎಸ್ ದಂತ ವೈದ್ಯರು, ಆಯುಷ ವೈದ್ಯರನ್ನು ನೇಮಿಸಿಕೊಳ್ಳಿ. ತಾಂತ್ರಿಕ ಸಮಿತಿಯಿಂದ ನಿಯಮಾನುಸಾರ ಅನುಮೋದನೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿಗೆ ಸಾನಿಟೈಸರ್ ಮಾಸ್ಕ್ ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಬೇಕು. ಸರ್ಕಾರದ ಪ್ರಾಮಾಣಿಕೃತ ಮಾರ್ಗಸೂಚಿ ಅನುಸಾರವಾಗಿ ಅಗತ್ಯವಿದ್ದವರಿಗೆ ಮಾತ್ರ ರೆಮ್​ಸಿವರ್ ನೀಡಬೇಕು. ಈ ಕುರಿತು ಸರಿಯಾಗಿ ಆಡಿಟ್ ಮಾಡಬೇಕು. ಜಿಲ್ಲೆಯ ಕೋವಿಡ್ ಹೆಲ್ಪ್​ಲೈನ್ ಕಾರ್ಯಾರಂಭಗೊಳಿಸಬೇಕು ಎಂದರು.

ಜಿಪಂ ಸಿಇಒ ಮಹಮ್ಮದ ರೋಷನ್ ಮಾತನಾಡಿ, ಸೋಂಕಿತರ ಸಂಪರ್ಕಪತ್ತೆ, ಟ್ರ್ಯಾಕಿಂಗ್, ಐಸೋಲೇಷನ್ ದಾಖಲೀಕರಣ ಕಾರ್ಯ ಸಮರ್ಪಕವಾಗಿಲ್ಲ. ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಆರೋಗ್ಯ, ಶಿಕ್ಷಣ ಇಲಾಖೆ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಬೇಕು. ಎರಡು ಇಲಾಖೆಯ ಜಿಲ್ಲಾ ಮುಖ್ಯಸ್ಥರು ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದರು.

ಎಸ್​ಪಿ ಕೆ.ಜಿ. ದೇವರಾಜ್, ಎಎಸ್​ಪಿ ವಿಜಯಕುಮಾರ ಸಂತೋಷ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net