ಮೇ 1ರಿಂದ ಕೇರ್‌ಬಲಿ ನಮ್ಮೆ

ಮೇ 1ರಿಂದ ಕೇರ್‌ಬಲಿ ನಮ್ಮೆ
Published on

ವಿರಾಜಪೇಟೆ: ಕೊಡವ ಟಗ್‌ಆಫ್‌ವಾರ್ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ಪುರುಷರು ಹಾಗೂ ಮಹಿಳೆಯರ ಕೇರ್‌ಬಲಿ ನಮ್ಮೆಯಲ್ಲಿ ಒಟ್ಟು 282 ಕುಟುಂಬಗಳು ಭಾಗವಹಿಸುತ್ತಿದೆ ಎಂದು ಬಾಳೆಕುಟ್ಟಿರ ಕುಟುಂಬದ ಅಧ್ಯಕ್ಷ ಮಂದಣ್ಣ ಹೇಳಿದರು.

ವಿರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಕೇರ್‌ಬಲಿ ನಮ್ಮೆಯ ಟೈಸ್ ಬಿಡುಗಡೆಗೊಳಿಸಿ ಮಾತನಾಡಿ, ಅರಮೇರಿಯ ಎಎಂಎಸ್ ವಿದ್ಯಾಸಂಸ್ಥೆಯ ಶಾಲಾ ಮೈದಾನದಲ್ಲಿ ಮೇ 1, 2ಮತ್ತು 3 ರಂದು ಪಂದ್ಯಗಳು ನಡೆಯಲಿವೆ. ಈ ಹಿಂದೆ ಮೇ 2, 3, 4ರಂದು ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, 4ರಂದು ಶಾಲೆಯಲ್ಲಿ ನೀಟ್ ಪರೀಕ್ಷೆ ನಡೆಯುತ್ತಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೇ 1 ರಂದು 10 ಗಂಟೆಗೆ ಅರಮೇರಿ ಎಸ್.ಎಂ.ಎಸ್ ವಿದ್ಯಾಪೀಠದ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಭಾಗವಹಿಸಲಿದ್ದಾರೆ.

ಪೊಮ್ಮಕ್ಕಡ ಪರವಾಗಿ ನಾಪೋಕ್ಲು ಕೊಡವ ಸಮಾಜ ಹಾಗೂ ಮಡಿಕೇರಿ ಕೊಡವ ಸಮಾಜಗಳ ನಡುವೆ ಹಾಗೂ ಪುರುಷರ ವಿಭಾಗದಲ್ಲಿ ಎರಡು ಕೊಡವ ಭಾಷಿಕ ಜನಾಂಗಗಳ ನಡುವೆ, ಪ್ರದರ್ಶನ ಪಂದ್ಯ ನಡೆಯಲಿದೆ. ಸಮಾರೋಪ ಸಮಾರಂಭ 3 ರಂದು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಯದುವಿರ್ ಕೃಷ್ಣದತ್ತ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಭಾಗವಸಲಿದ್ದಾರೆ ಎಂದು ಹೇಳಿದರು.

ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಮೊನ್ನೋಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, 4 ವರ್ಷದಿಂದ ಕೇರ್‌ಬಲಿ ನಮ್ಮೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ ಬಾಳೆಕುಟ್ಟಿರ ಸತ್ಯ ಉತ್ತಯ್ಯ, ರಾಜಾ ಗಣಪತಿ, ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಉಪಾಧ್ಯಕ್ಷ ಚಟ್ಟಂಗಡ ರವಿ ಸುಬ್ಬಯ್ಯ, ಖಜಾಂಚಿ ಜಮ್ಮಡ ಗಿಲ್, ಜಂಟಿ ಕಾರ್ಯದರ್ಶಿ ಚಟ್ಟಂಗಡ ಕಂಬ ಕಾರ್ಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net