

ವಿಶೇಷ ವರದಿ
ತುಮಕೂರು: ಜಯದೇವ ಹೃದ್ರೋಗ ಸಂಸ್ಥೆ ಮಾರ್ಗದರ್ಶನದಲ್ಲಿ ತುಮಕೂರಿನಲ್ಲಿ 12 ಎಕರೆ ಪ್ರದೇಶದಲ್ಲಿ "ಹೃದ್ರೋಗ ಕೇಂದ್ರ' ತಲೆ ಎತ್ತಲಿದೆ. 65 ಕೋಟಿ ರೂ., ವೆಚ್ಚದಲ್ಲಿ ಈ ಕಾರ್ಡಿಯಾಕ್ ಸೆಂಟರ್ ನಿರ್ಮಾಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯಡಿ ತುಮಕೂರಿನಲ್ಲಿ ಹೃದ್ರೋಗ ಕೇಂದ್ರ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಆಸ್ಥೆವಹಿಸಿದ್ದು ಈಗಾಗಲೇ ಜಿಲ್ಲಾಡಳಿತ ಈಗಾಗಲೇ ಜಾಗವನ್ನು ಸಹ ಗುರುತಿಸಿದೆ. ಜಿಲ್ಲಾಕೇಂದ್ರಕ್ಕೆ ಹತ್ತಿರವಿರುವ ತುಮಕೂರು ತಾಲೂಕು ವಡ್ಡರಹಳ್ಳಿ (ಬೆಳಗುಂಬ ಸಮೀಪ) ಬಳಿ 12 ಎಕರೆ ಜಾಗವನ್ನು ಗುರುತಿಸಿ, ಹೃದ್ರೋಗ ಕೇಂದ್ರ ಸ್ಥಾಪನೆಗೆ ಹಸ್ತಾಂತರಿಸಲು ಜಿಲ್ಲಾಡಳಿತ ತುದಿಗಾಲ ಮೇಲೆ ನಿಂತಿದೆ.
ಈ ಹಿಂದೆ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ತೆರೆಯಲು ಆಸಕ್ತಿವಹಿಸಿದ್ದರಾದರು ಇದು ಸಾಕಾರಗೊಂಡಿರಲಿಲ್ಲ. ಇದೀಗ ಸಚಿವ ಪರಮೇಶ್ವರ್ ಅವರೇ ಗಣಿಬಾಧಿತ ನಿಧಿಯನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೃದ್ರೋಗ ಆಸ್ಪತ್ರೆ ಅಥವಾ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಈ ನಿಟ್ಟಿನಲ್ಲಿ ನೀಲನೆಯನ್ನು ಸಿದ್ಧಪಡಿಸಿ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಕೈಗೆ ತಲುಪಿಸಿದ್ದಾರೆ.
ಮತ್ತೊಂದು ಟ್ರಾಮಾ ಸೆಂಟರ್: ಈಗಾಗಲೇ ಸ್ಮಾರ್ಟ್ಸಿಟಿ ಯೋಜನೆ ಅಡಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಟ್ರಾಮಾ ಸೆಂಟರ್ ತೆರೆಯಲಾಗಿದೆ. ಕೈಗಾರಿಕಾ ಪ್ರದೇಶ ವಸಂತನರಸಾಪುರದಲ್ಲಿ ಮತ್ತೊಂದು ಟ್ರಾಮಾ ಸೆಂಟರ್ ಸ್ಥಾಪನೆಗೆ ಸಹ ಪ್ರಸ್ತಾವನೆ ಸಲ್ಲಿಸಲಾಗಿದೆ. 27 ಕೋಟಿ ರೂ., ವೆಚ್ಚದ ತುರ್ತು ಅಪಘಾತ ಚಿಕಿತ್ಸಾ ಕೇಂದ್ರ (ಟ್ರಾಮಾ ಸೆಂಟರ್) ಇದಾಗಿದೆ.