ಹಣದ ಹೊಳೆ ಹರಿಯುತ್ತೆಂದು ಆಮಿಷವೊಡ್ಡಿ ರಟ್ಟಿನ ಹಾಳೆ ಕೊಟ್ಟು ವಂಚನೆ!

Fruad
Published on

ಬೆಂಗಳೂರು: ಲೋಹ ಲೇಪನ ಮಾಡಿದ ರಟ್ಟಿನ ಹಾಳೆಗಳನ್ನು ತೋರಿಸಿ ಅದೃಷ್ಟ ಖುಲಾಯಿಸುವ ಪುರಾತನ ಕಾಲದ ಅಪರೂಪದ ವಸ್ತುವೆಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಹೈದ್ರಾಬಾದ್ ಮೂಲದ ಸುಬ್ರಮಣ್ಯ ಅಲಿಯಾಸ್ ಬಾಲಸುಬ್ರಹ್ಮಣ್ಯ (63) ಬಂಧಿತ. ಆರೋಪಿಯಿಂದ ಹಳೇ ಕಾಲದ ಲಿಪಿಯಂತೆ ಬರೆದಿದ್ದ ಎರಡು ರಟ್ಟಿನ ಹಾಳೆ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಆರೀಫ್ ಎಂಬಾತ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಸುಬ್ರಹ್ಮಣ್ಯ ಮತ್ತು ಆರೀಫ್ ಕೆಲ ವರ್ಷಗಳ ಹಿಂದೆ ಪರಿಚಯವಾಗಿದ್ದರು. ಆರೀಫ್ ರಟ್ಟಿನ ಮೇಲೆ ಹಿತ್ತಾಳೆ ಹಾಗೂ ತಾಮ್ರ ಲೋಹವನ್ನು ಲೇಪಿಸುತ್ತಿದ್ದ. ಅದರ ಮೇಲೆ ಪುರಾತನ ಕಾಲದ ಲಿಪಿ ಹೋಲುವ ಅಕ್ಷರಗಳನ್ನು ಬರೆಯುತ್ತಿದ್ದ.

ವಿಶೇಷ ಶಕ್ತಿ ಎಂದು ನಂಬಿಸಿದ: ಆರೀಫ್​ನಿಂದ ತಾಮ್ರ ಲೇಪನದ ಹಾಳೆಗಳನ್ನು ಪಡೆಯುತ್ತಿದ್ದ ಸುಬ್ರಹ್ಮಣ್ಯ, ಅವುಗಳನ್ನು ಅಮಾಯಕರಿಗೆ ತೋರಿಸಿ ‘ಇದು ಪುರಾತನ ಕಾಲದ ಅಪರೂಪದ ವಸ್ತು. ಮನೆಯಲ್ಲಿಟ್ಟು ಪ್ರತಿನಿತ್ಯ ಪೂಜೆ ಮಾಡಿದರೆ ಕಷ್ಟಗಳೆಲ್ಲ ಪರಿಹಾರವಾಗಿ ಹಣದ ಹೊಳೆ ಹರಿಯುತ್ತದೆ’ ಎಂದು ಹೇಳುತ್ತಿದ್ದ. ಜನರ ಅರಿವಿಗೆ ಬಾರದಂತೆ ತಾಮ್ರ ಲೇಪನದ ಶೀಟ್​ಗೆ ರಾಸಾಯನಿಕ ಮೂಲಕ ಬೆಂಕಿ ಹಚ್ಚಿ, ಅದಕ್ಕೆ ವಿಶೇಷ ಶಕ್ತಿ ಇದೆ ಎಂದು ಬಿಂಬಿಸುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net